ರಾಷ್ಟ್ರೀಯ

ತಾನು ಬದುಕಿದ್ದೇನೆ ಎಂದು ಸಾಬೀತುಪಡಿಸುವ ಅನಿವಾರ್ಯತೆಗೆ ಸಿಲುಕಿದ ರೈತ!

Pinterest LinkedIn Tumblr


ಭೋಪಾಲ್: ಛತರ್ಪುರ ಜಿಲ್ಲೆಯ ಬಡ ರೈತನೊಬ್ಬ ವಿಚಿತ್ರ ಸಮಸ್ಯೆಯಲ್ಲಿ ಸಿಲುಕಿದ್ದಾನೆ. ಆತನಿಗೀಗ ತಾನು ಬದುಕಿದ್ದೇನೆ ಎಂದು ಸಾಬೀತುಪಡಿಸುವ ಅನಿವಾರ್ಯತೆ ಎದುರಾಗಿದೆ.

ಬಹಾದ್ಪುರ ಗ್ರಾಮದ ನಿವಾಸಿಯಾಗಿರುವ ರೈತ ರಾಮೇಶ್ವರ ಪಟೇಲ್ ತನ್ನ ತುಂಡು ಭೂಮಿಯನ್ನು ಉಳಿಸಿಕೊಳ್ಳಲು ತಾನು ಸತ್ತಿಲ್ಲ, ಜೀವಂತವಾಗಿದ್ದೇನೆ, ಎಂದು ನಿರೂಪಿಸಬೇಕಿದೆ. ಆದಾಯ ತೆರಿಗೆ ಇಲಾಖೆ ದಾಖಲೆಗಳಲ್ಲಿ ಆತ ಬದುಕಿಲ್ಲ ಎಂದು ದಾಖಲಾಗಿದೆ.

ಪ್ರಕರಣದ ವಿವರ

ತಾನು ಸತ್ತಿದ್ದೇನೆ ಎಂದು ಸರಕಾರಿ ದಾಖಲೆಗಳಲ್ಲಿ ನಮೂದಾಗಿದೆ ಎಂಬುದು ಗಮನಕ್ಕೆ ಬರುತ್ತಿದ್ದಂತೆ ರೈತ ರಾಮೇಶ್ವರ್ ಸಂಬಂಧಿತ ಸರಕಾರಿ ಕಚೇರಿಗೆ ಧಾವಿಸಿದ್ದಾನೆ. ಹಲವು ದಿನಗಳ ಓಡಾಟದ ಬಳಿಕ ಕೊನೆಗೂ ಸಂಬಂಧಿತ ಗುಮಾಸ್ತನನ್ನು ಭೇಟಿಯಾಗಲು ರೈತ ರಾಮೇಶ್ವರ ಯಶಸ್ವಿಯಾಗಿದ್ದಾನೆ. ಆದರೆ, ರೈತ ಬದುಕಿರುವುದನ್ನು ಒಪ್ಪಲು ಗುಮಾಸ್ತ ಸಿದ್ಧನಿರಲಿಲ್ಲ. ಇದರಿಂದ ದಿಕ್ಕೇ ತೋಚದಂತಾದ ರಾಮೇಶ್ವರ್ ತಹಶೀಲ್ದಾರನನ್ನು ಭೇಟಿಯಾಗಿ ಎಲ್ಲ ವಿಷಯವನ್ನು ಹೇಳಿದ್ದು, ಅವರು ಅವನಿಗೆ ಸಹಾಯ ಮಾಡಲು ಒಪ್ಪಿಕೊಂಡಿದ್ದಾರೆ.

ಗ್ರಾಮ ಲೆಕ್ಕಿಗ ವಿಷ್ಣು ಸೋನಿಗೆ ತನ್ನ ಮೇಲೆ ಹಳೆಯ ದ್ವೇಷವಿದ್ದು , ಹೀಗಾಗಿ ಆತ ನಾನು ಸತ್ತಿದ್ದೇನೆಂದು ದಾಖಲೆ ಸೃಷ್ಟಿಸಿದ್ದಾನೆ. ಅಷ್ಟೇ ಅಲ್ಲ ನಾನು ಹೊಂದಿದ್ದ ತುಂಡು ಭೂಮಿಯನ್ನು ಘಾಸಿಪುರ ಗ್ರಾಮದ ಕೆಲ ಜನರ ಹೆಸರಿಗೆ ವರ್ಗಾಯಿಸಿದ್ದಾನೆ, ಎಂಬುದು ರೈತನ ಆರೋಪ.

ಈ ಪ್ರಕರಣವೀಗ ಜಿಲ್ಲಾಧಿಕಾರಿ ಕಚೇರಿ ಮೆಟ್ಟಿಲೇರಿದ್ದು, ಈ ಕುರಿತು ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದೇನೆ. ಸತ್ಯ ರೈತನ ಪರವಾಗಿದ್ದೇ ಆದರೆ, ತಪ್ಪೆಸಗಿದವರಿಗೆ ಸರಿಯಾದ ಶಿಕ್ಷೆ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ರಮೇಶ್ ಭಂಡಾರಿ ಹೇಳಿದ್ದಾರೆ.

Comments are closed.