ಕರ್ನಾಟಕ

ಸರಗಳ್ಳ ಅಚ್ಯುತ್‌ ಕುಮಾರ್‌ ಗಣಿ ಕಾಲಿಗೆ ಗುಂಡಿಕ್ಕಿ ಬಂಧಿಸಿದ ಪೊಲೀಸರು!

Pinterest LinkedIn Tumblr


ಬೆಂಗಳೂರು: ಸಿಲಿಕಾನ್‌ ಸಿಟಿ ಸುತ್ತಮುತ್ತಲೂ ಮತ್ತು ರಾಜ್ಯದ ವಿವಿಧೆಡೆ 70ಕ್ಕೂ ಹೆಚ್ಚು ಸರಗಳ್ಳತರನಲ್ಲಿ ಭಾಗಿಯಾಗಿರುವ ಕುಖ್ಯಾತ ಸರಗಳ್ಳ ಅಚ್ಯುತ್‌ ಕುಮಾರ್‌ ಗಣಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಭಾನುವಾರ ರಾತ್ರಿ ಜ್ಞಾನ ಭಾರತಿ ಠಾಣೆಯ ವ್ಯಾಪ್ತಿಯಲ್ಲಿ ಗಸ್ತಿನಲ್ಲಿದ್ದ ಜ್ಞಾನ ಭಾರತಿ ಹೆಡ್‌ ಕಾನ್‌ಸ್ಟೆಬಲ್‌ ಚಂದ್ರಶೇಖರ್‌ ಅವರು ಪಲ್ಸರ್‌ ಬೈಕ್‌ನಲ್ಲಿ ಬಂದಿದ್ದ ಅಚ್ಯುತ್‌ ಕುಮಾರ್‌ನನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಚಂದ್ರಶೇಖರ್‌ ಅವರ ಮೇಲೂ ದಾಳಿ ನಡೆಸಿದ್ದ, ಎದೆಗುಂದದೆ ಆತನನ್ನು ವಶಕ್ಕೆ ಪಡೆದಿದ್ದರು.

ಬಳಿಕ ರಾತ್ರಿ ಸುಮಾರು 2.30 ರ ವೇಳೆ ಆತನನ್ನು ಕುಂಬಳಗೋಡು ಠಾಣೆಗೆ ಕರೆದೊಯ್ಯುತ್ತಿದ್ದ ವೇಳೆ ಮೂತ್ರ ವಿಸರ್ಜನೆಗೆಂದು ಇಳಿದು ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದ.

ಪರಾರಿಯಾದ ಕೂಡಲೇ ಪೊಲೀಸರು ಆತನನ್ನು ವಶಕ್ಕೆ ಪಡೆಯಲು ತಂಡಗಳನ್ನು ರಚಿಸಿದ್ದರು. ಬೆಳಗ್ಗೆ 5.30 ರ ವೇಳೆಗೆ ನೈಸ್‌ ರಸ್ತೆಯಲ್ಲಿ ಕಂಡು ಬಂದಿದ್ದು, ಪೊಲೀಸರು ಸುತ್ತುವರಿದಿದ್ದಾರೆ. ಶರಣಾಗಲು ಸೂಚಿಸಿದರೂ ಪೊಲೀಸರ ಮೇಲೆ ದಾಳಿಗೆ ಮುಂದಾಗಿದ್ದಾನೆ.

ಕೋಡಿಹಳ್ಳಿ ಠಾಣೆ ಇನ್ಸ್‌ಪೆಕ್ಟರ್‌ ಪ್ರವೀಣ್‌ ಎಲಿಗೆರೆ ಅವರು ಗುಂಡು ಹಾರಿಸಿದ್ದು ಅಚ್ಯುತ್‌ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಈತ ಒಂಟಿಯಾಗಿ ಸರಗಳ್ಳತನ ಮಾಡುತ್ತಿದ್ದು, ಇದನ್ನೇ ವೃತ್ತಿಯಾಗಿಸಿಕೊಂಡಿದ್ದ ಎನ್ನಲಾಗಿದೆ. ತುಮಕೂರು, ಚಿತ್ರದುರ್ಗ ಮತ್ತು ಬೆಂಗಳೂರಿನ ವಿವಿಧೆಡೆ ಈತ ಸರಗಳ್ಳತನ ನಡೆಸಿದ್ದ ಎಂದು ತಿಳಿದು ಬಂದಿದೆ. ಪಲ್ಸರ್‌ ಬೈಕ್‌ನಲ್ಲಿ ಹೆಲ್ಮೆಟ್‌ ಧರಿಸಿ ಬರುತ್ತಿದ್ದ ಈತ ಒಂಟಿ ಮಹಿಳೆಯರನ್ನು ಬೆಳ್ಳಂಬೆಳಗ್ಗೆ ಮತ್ತು ಸಂಜೆ ಕಳೆದ ಬಳಿಕ ಟಾರ್ಗೆಟ್‌ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ವಿವಿಧೆಡೆ ಸಿಸಿಟಿವಿಯಲ್ಲಿ ಈತನ ಕೃತ್ಯ ದಾಖಲಾಗಿದ್ದು ಪೊಲೀಸರಿಗೆ ಈತ ಮೋಸ್ಟ್‌ ವಾಂಟೆಡ್‌ ಆಗಿದ್ದ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಚಂದ್ರಶೇಖರ್‌ಗೆ ಬಹುಮಾನ
ಕುಖ್ಯಾತನನ್ನು ವಶಕ್ಕೆ ಪಡೆದ ಕಾನ್ಸ್‌ಟೇಬಲ್‌ ಚಂದ್ರಶೇಖರ್‌ ಅವರಿಗೆ ನಗರ ಪೊಲೀಸ್‌ ಆಯುಕ್ತ ಸುನೀಲ್‌ ಕುಮಾರ್‌ ಅವರು 1 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಜೊತೆಗೆ ಕುಟುಂಬದ ಉತ್ತರ ಭಾರತ ಪ್ರವಾಸಕ್ಕೆ ಅವಕಾಶ ಮಾಡಿ ಕೊಡಲಾಗಿದೆ. ಗಾಯಗೊಂಡಿರುವ ಹಿನ್ನಲೆಯಲ್ಲಿ ಚೇತರಿಸಿಕೊಳ್ಳಲು 1 ತಿಂಗಳು ರಜೆಯನ್ನೂ ನೀಡಲಾಗಿದೆ.

Comments are closed.