
ಬೆಂಗಳೂರು: ಆಪರೇಷನ್ “ಅಮ್ಮ’. ಇದು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಆರೋಪಿಗಳು ಇಟ್ಟಿದ್ದ ಕೋಡ್‌ವರ್ಡ್.
ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳ ಬಳಿ ಪತ್ತೆಯಾದ ಡೈರಿಯಲ್ಲಿ ಮೊಬೈಲ್ ನಂಬರ್, ಭೇಟಿ ಸ್ಥಳ ಹಾಗೂ ಇತರೆ ವಿಚಾರವಾದಿಗಳ ಹೆಸರಗಳನ್ನು ಕೋಡ್‌ವರ್ಡ್‌ನಲ್ಲಿ ಬರೆದುಕೊಂಡಿರುವುದು ಪತ್ತೆಯಾಗಿದೆ.
ಶಂಕಿತರು, ಗೌರಿ ಹತ್ಯೆಗೆ “ಆಪರೇಷನ್ ಅಮ್ಮ’ ಎಂದು ಕೋಡ್‌ವರ್ಡ್ ಬರೆದುಕೊಂಡು ಹತ್ಯೆಯ ಸಂಚು ರೂಪಿಸಿ ಸೆ.5ರಂದು ರಾತ್ರಿ 8.40ರ ಸುಮಾರಿಗೆ ಗೌರಿ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆಗೈದು ಪರಾರಿಯಾಗಿದ್ದರು.
ಪೊಲೀಸರಿಗೆ ಸಣ್ಣ ಸುಳಿವೂ ಸಿಗಬಾರದೆಂದು ಮುನ್ನೆಚ್ಚರಿಕೆ ವಹಿಸಿದ್ದ ಆರೋಪಿಗಳು ಕೋಡ್‌ವರ್ಡ್ ಮೂಲಕವೇ ಎಲ್ಲ
ವಿಚಾರಗಳನ್ನು ವ್ಯವಹರಿಸುತ್ತಿದ್ದರು. ಎಸ್‌ಐಟಿ ಅಧಿಕಾರಿಗಳು ಆರೋಪಿಗಳಿಂದ ವಶಕ್ಕೆಪಡೆದಿರುವ ಡೈರಿಯಲ್ಲಿ ಸಾಕಷ್ಟು ಕೋಡ್ ವರ್ಡ್‌ಗಳು ಪತ್ತೆಯಾಗಿವೆ. ಇದರಲ್ಲಿ ಮುಖ್ಯವಾಗಿ ಗೌರಿ ಹತ್ಯೆಯನ್ನು ಆರೋಪಿಗಳು “ಆಪರೇಷನ್ ಅಮ್ಮ’ ಎಂಬ ಹೆಸರಿನಡಿ ಕಾರ್ಯಾಚರಣೆ ನಡೆಸಿದ್ದರು.
ಇನ್ನು ಪರಶುರಾಮ ವಾಗ್ಮೋರೆಯನ್ನು ಪರಿಚಯಿಸಿಕೊಂಡ ವ್ಯಕ್ತಿಗಳು ಕನ್ನಡ,ಮರಾಠಿ, ಹಿಂದಿ, ತೆಲುಗು ಮಿಶ್ರಿತ ಭಾಷೆಗಳಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಪ್ರತಿಯೊಂದು ಕೋಡ್‌ವರ್ಡ್‌ಗಳನ್ನೂ ಮರಾಠಿ, ಇಂಗ್ಲಿಷ್ ಮಿಶ್ರಿತ ಭಾಷೆಯಲ್ಲಿ ಬಳಕೆ ಮಾಡಲಾಗಿತ್ತು. ಈಗಾಗಲೇ ಎಸ್‌ಐಟಿ ತಂಡ ಕೆಲ ಕೊಡ್‌ವರ್ಡ್‌ಗಳನ್ನು ಡಿ-ಕೋಡ್ ಮಾಡಿದೆ.
ವಿಶೇಷವೆಂದರೆ, ಗೌರಿ ಅವರನ್ನು ಹತ್ಯೆಗೈದ ಎನ್ನಲಾದ ಪರಶುರಾಮಗೆ ಗೌರಿಯ ಹೆಸರೇ ಗೊತ್ತಿರಲಿಲ್ಲ. ಹತ್ಯೆಗೂ ಕೆಲ ದಿನಗಳ ಹಿಂದಷ್ಟೇ ಸಾಮಾಜಿಕ ಜಾಲ ತಾಣಗಳಲ್ಲಿ ನೋಡಿ ಆತ ತಿಳಿದುಕೊಂಡಿ ದ್ದಾನೆ. ಅಲ್ಲದೇ,ಈತನಿಗೆ ಕೊಲ್ಲಲು ಪ್ರೇರಣೆ ನೀಡಿದ ರೂವಾರಿಗಳು ಗೌರಿ ಹತ್ಯೆಯನ್ನು “ಆಪರೇಷನ್ ಅಮ್ಮ’ ಎಂದು ಪರಿ ಚಯಿಸಿದ್ದರು.
ಈತ ಸ್ವತಃ ತಿಳಿದುಕೊಳ್ಳುವ ತನಕ ಗೌರಿಯನ್ನು ಅಮ್ಮ ಎಂದೇ ಸಂಭೋ ದಿಸುತ್ತಿದ್ದ.ಇತರೆ ಆರೋಪಿಗಳು ಕೂಡ ಗೌರಿಯನ್ನು ಅಮ್ಮ ಎಂದು ಕರೆಯುತ್ತಿದ್ದರು.
ನ್ಯಾಯ ಸಿಗುವ ವಿಶ್ವಾಸ: ಕವಿತಾ ಲಂಕೇಶ್
ಬೆಂಗಳೂರು: ಗೌರಿ ಹತ್ಯೆ ಪ್ರಕರಣದಲ್ಲಿಪ್ರಮುಖ ಆರೋಪಿಯನ್ನು ಬಂಧಿಸಿರುವುದರಿಂದ ತಮಗೆ ನ್ಯಾಯ ಸಿಗುವ ಭರವಸೆ ಇದೆ ಎಂದು ಗೌರಿ ಸಹೋದರಿ ಕವಿತಾ ಲಂಕೇಶ್ ಹೇಳಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯಅವರನ್ನು ಭೇಟಿ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೌರಿ ಹತ್ಯೆ ಆರೋಪಿಯನ್ನು ಬಂಧಿಸಿದ್ದಾರೆ. ಹೀಗಾಗಿ, ಧನ್ಯವಾದ ತಿಳಿಸಲು ಬಂದಿದ್ದೇನೆ. ಎಸ್‌ಐಟಿ ತನಿಖಾ ತಂಡ
ಸರಿಯಾದ ಮಾರ್ಗದಲ್ಲಿ ಹೋಗುತ್ತಿದೆ.ಪ್ರಕರಣ ತಾರ್ಕಿಕ ಅಂತ್ಯ ಕಾಣುವ ವಿಶ್ವಾಸವಿದೆ ಎಂದು ತಿಳಿಸಿದರು. ಈ ಪ್ರಕರಣದಲ್ಲಿ ಧರ್ಮದ ವಿಚಾರದಲ್ಲಿ ವಿಷ ಬೀಜ ತುಂಬುತ್ತಿರುವುದು ಬಹಿರಂಗವಾಗಿದೆ. ನಮಗೂ ನಕ್ಸಲರೊಂದಿಗೆ ಸಂಪರ್ಕವಿದೆ ಎಂದು ಹೇಳಿದ್ದರು. ಆಗಲೂ ಪೊಲಿಸರು ತನಿಖೆ ನಡೆಸಿದ್ದರು. ಈಗ ಗೌರಿಗೆ ನ್ಯಾಯ ಸಿಗುವ ವಿಶ್ವಾಸ ಬಂದಿದೆ ಎಂದರು.
Comments are closed.