ಕರ್ನಾಟಕ

ಪ್ರಾರಂಭವಾಗದ ಮುಂಗಾರು: ವಾಡಿಕೆಯ ಪೂರ್ವ ಮುಂಗಾರಿನ ಶೇ.35ರಷ್ಟು ಮಳೆ

Pinterest LinkedIn Tumblr


ಬೆಂಗಳೂರು: ನಗರದಲ್ಲಿ ವಾಡಿಕೆಯ ಪೂರ್ವ ಮುಂಗಾರು ಮಳೆಯ ಶೇ.35ರಷ್ಟು ಮಳೆ ಈಗಾಗಲೇ ಬಿದ್ದಿದೆ.

ಸಾಮಾನ್ಯವಾಗಿ ಜೂನ್‌ನಿಂದ ಸೆಪ್ಟೆಂಬರ್‌ ವರೆಗೆ ಬೆಂಗಳೂರಿನಲ್ಲಿ 98 ಸೆಂ.ಮೀ ಮಳೆಯಾಗುತ್ತದೆ. ಆದರೆ ಈ ಬಾರಿ ಜೂ. 3ರ ವರೆಗೆ 35 ಸೆಂ.ಮೀ ಮಳೆ ಬಿದ್ದಿರುವುದು ದಾಖಲಾಗಿದೆ. ಇದೇ ಮಾದರಿಯಲ್ಲಿ ಮಳೆಯಾದಲ್ಲಿ, ಹೊಸ ದಾಖಲೆಯಾಗಲಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು ಭಾಗಕ್ಕೆ ನೈಋತ್ಯ ಮಾರುತಗಳಿಂದ ಮಳೆಯಾಗುತ್ತದೆ. ಜೂನ್‌ನಿಂದ ಸೆಪ್ಟೆಂಬರ್‌ ವರೆಗೆ ವರ್ಷದ ಮೊದಲ ಮಳೆಯಾಗುವುದು ವಾಡಿಕೆ. ಅಂತೆಯೇ ನವಂಬರ್‌ ಹಾಗೂ ಡಿಸೆಂಬರ್‌ನಲ್ಲಿ ವಾಯುವ್ಯ ಮಾರುತಗಳಿಂದ ಮಳೆಯಾಗುತ್ತದೆ. ವರ್ಷದ ಉಳಿದ ಸಮಯದಲ್ಲಿ ಮಳೆಯಾಗುವುದನ್ನು ಪೂರ್ವ ಮುಂಗಾರು ಎನ್ನಲಾಗುತ್ತದೆ. ಪೂರ್ವ ಮುಂಗಾರು ಅವಧಿಯಲ್ಲಿ ಮಳೆ ಕಡಿಮೆ ಇರುವುದು ವಾಡಿಕೆ. ಆದರೆ ಈ ಬಾರಿ ಒಟ್ಟಾರೆ ಬೀಳುವ ಮಳೆಯ ಶೇ.35ರಷ್ಟು ಈಗಾಗಲೇ ಬಿದ್ದಿರುವುದಾಗಿ ಹವಾಮಾನ ಇಲಾಖೆ ಹೇಳಿದೆ.

ಕಳೆದ 100 ವರ್ಷದಲ್ಲಿ ಮಳೆಯಾಗಿರುವ ದಾಖಲೆಗಳ ಪ್ರಕಾರ ಆಗಸ್ಟ್‌, ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ನಲ್ಲಿ ಅತಿ ಹೆಚ್ಚು ಮಳೆ ಬಿದ್ದಿದೆ. ಸೋಮವಾರದಿಂದ ಮೂರ್ನಾಲ್ಕು ದಿನಗಳ ಕಾಲ ಗುಡುಗು ಸಹಿತ ಭಾರಿ ಮಳೆಯಾಗುವ ನಿರೀಕ್ಷೆ ಇರುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರವು ಮುಂದಿನ 24 ಗಂಟೆಗಳಲ್ಲಿ ಪ್ರವಾಹದ ಮುನ್ಸೂಚನೆ ನೀಡಿದ್ದು, ರಾಜರಾಜೇಶ್ವರಿ ನಗರ ವಲಯ, ಬೆಂಗಳೂರು ಪೂರ್ವ, ದಕ್ಷಿಣ, ಮಹದೇವಪುರ ಹಾಗೂ ಬೊಮ್ಮನಹಳ್ಳಿ ವಲಯಗಳಲ್ಲಿ, ತಗ್ಗು ಪ್ರದೇಶಗಳಲ್ಲಿ ಪ್ರವಾಹದ ಮುನ್ಸೂಚನೆ ನೀಡಿದೆ.

Comments are closed.