
ಬೆಂಗಳೂರು: ದಿನೇಶ್ ಅಮೀನ್ ಮಟ್ಟು ಮೇಲೆ ಹತ್ಯೆಗೆ ಸುಪಾರಿ ಆರೋಪ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ಅಮೀನ್ ಮಟ್ಟು ಮೇಲೆ ನಿರಾಧಾರ ಆರೋಪ ಮಾಡಿದ್ದ ಭಾಸ್ಕರ್ ಪ್ರಸಾದ್ ಎಂಬಾತನ ವಿರುದ್ಧ ಪ್ರಗತಿಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಕರ್ನಾಟಕ ಜನ ಚಳುವಳಿಗಳಿಂದ ದೂರಯಿಡಲು ಪ್ರಗತಿಪರ ಸಂಘಟನೆಗಳು ನಿರ್ಣಯಕ್ಕೆ ಬಂದಿವೆ ಎಂದು ಮಾಹಿತಿ ಲಭ್ಯವಾಗಿದೆ.
ಭಾಸ್ಕರ್ ಪ್ರಸಾದ್ ಅಮೀನ್ ಮಟ್ಟು ವಿರುದ್ಧ ಬಲಪಂಥೀಯ ಲೇಖಕರೊಬ್ಬರ ಹತ್ಯೆಗೆ ಸುಪಾರಿ ನೀಡಿದ್ದರು ಎಂದು ನಿರಾಧಾರ ಆರೋಪವನ್ನು ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದರು. ಈ ಪೋಸ್ಟ್ ಫೇಸ್ಬುಕ್ಕಿನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಪ್ರಗತಿಪರ ಸಂಘನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ಮಟ್ಟು ವಿರುದ್ಧ ನಿರಾಧಾರ ಆರೋಪ ಸುತ್ತ ಚರ್ಚೆ ತೀವ್ರಗೊಳ್ಳುತ್ತಿದ್ದಂತೆ ಪ್ರಗತಿಪರ ಸಂಘನೆಗಳ ಮುಖಂಡರು ತುರ್ತ ಸಭೆಯನ್ನು ಕೆದಿದ್ದರು. ದಿನೇಶ್ ಅಮೀನ್ ಮಟ್ಟು ಅವರನ್ನು ಬೆಂಬಲಿಸುವ ಸಲುವಾಗಿ ನಿನ್ನೆ ಶನಿವಾರ ಫ್ರೀಡಂ ಪಾರ್ಕ್ನಲ್ಲಿ ಸಭೆ ನಡೆಸಲಾಯ್ತು. ಹಲವಾರು ಸಂಘಟನೆಗಳ ಮುಖಂಡರು ಭಾಗವಹಿಸಿದ್ದ ಸಭೆಯಲ್ಲಿ ಮಟ್ಟು ಅವರಿಗೆ ಬೆಂಬಲವಾಗಿ ನಿಲ್ಲುವ ನಿರ್ಣಯ ಕೈಗೊಳ್ಳಲಾಯ್ತು ಎಂದು ಸುದ್ದಿ ಮಾಧ್ಯಮಕ್ಕೆ ತಿಳಿದು ಬಂದಿದೆ.
ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳು ಇಂತಿವೆ:
1. ದಿನೇಶ್ ಅಮೀನ್ ಮಟ್ಟು ಮೇಲೆ ಭಾಸ್ಕರ ಪ್ರಸಾದ್ ಆರೋಪ ನಿರಾಧಾರ. ಹೀಗಾಗಿ ಮಟ್ಟು ಮೇಲಿನ ಆರೋಪ ಜನಚಳುವಳಿಗಳ ಮೇಲೆ ಭಾಸ್ಕರ ಪ್ರಸಾದ್ ಮಾಡಿರುವ ದ್ರೋಹ ಎಂದು ಪರಿಗಣಿಸತಕ್ಕದ್ದು.
2. ದಿನೇಶ್ ಅಮೀನ್ ಮಟ್ಟು ಈಗಾಗಲೇ ಪ್ರಕರಣ ದಾಖಲಿಸಿದ್ದು, ಈ ಸಂಬಂಧ ಆರೋಪಿ ಭಾಸ್ಕರ ಪ್ರಸಾದನನ್ನು ತಕ್ಷಣ ಬಂಧಿಸಲು ಪೊಲೀಸ್ ವರಿಷ್ಠರನ್ನು ಒತ್ತಾಯಿಸುವುದು.
3. ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಭಾಸ್ಕರ ಪ್ರಸಾದನ ವಿರುದ್ದ ಸೂಕ್ತ ಕ್ರಮಕ್ಕೆ ಸಾಹಿತಿಗಳು, ಹೋರಾಟಗಾರರು, ಸಂಘಟನೆಗಳ ನಿಯೋಗ ಆಗ್ರಹಿಸುವುದು
4. ಭಾಸ್ಕರ ಪ್ರಸಾದ್ ಅವರನ್ನು ಎಲ್ಲಾ ಜನಪರ ಸಂಘಟನೆಗಳು, ಜನಚಳುವಳಿಗಳು ಬಹಿಷ್ಕರಿಸುವಂತೆ ಸಭೆಯಲ್ಲಿ ಭಾಗಿಯಾಗಿದ್ದ ಮುಖಂಡರು ತಮ್ಮ ಸಂಘಟನೆಗಳ ಬಳಿ ಚರ್ಚಿಸುವುದು.
5. ಉಡುಪಿ ಚಲೋ ಖ್ಯಾತಿಯ ಡಿಡಿಎಚ್ಎಸ್ನಿಂದ ಭಾಸ್ಕರ ಪ್ರಸಾದ್ ನನ್ನ ಈಗಾಗಲೇ ಕೈಬಿಡಲಾಗಿದ್ದು, ಭಾಸ್ಕರ ಪ್ರಸಾದ್ ಅವರಿಗೂ ಡಿಡಿಎಚ್ಎಸ್ ಗೂ ಸಂಬಂಧವಿಲ್ಲ ಎಂದು ಅಧಿಕೃತವಾಗಿ ಪ್ರಕಟಿಸುವ ಕುರಿತು ಚರ್ಚಿಸುವುದು.
6. ಸಾಮಾಜಿಕ ಜಾಲತಾಣದಲ್ಲಿ ಜನಪರ ಹೋರಾಟಗಾರರು ಭಾಸ್ಕರ ಪ್ರಸಾದ್ ಮಾಧರಿಯಂತೆ ಅಶ್ಲೀಲ, ಆಕ್ಷೇಪಾರ್ಹ, ನಿರಾಧಾರ ಆರೋಪಗಳನ್ನು ಮಾಡದಂತೆ ಸ್ವಯಂ ನಿಯಂತ್ರಣ ಹೇರಿಕೊಳ್ಳುವುದು.
7. ಗೌರಿ ಹಂತಕರು ಬಂಧಿಯಾಗಿ, ಚಾರ್ಜ್ ಶೀಟ್ ಸಲ್ಲಿಯಾದ ದಿನವೇ ದಿನೇಶ್ ವಿರುದ್ದ ಈ ರೀತಿಯ ಆರೋಪ ಬಂದಿರುವುದರ ಹಿಂದೆ ಭಾಸ್ಕರ ಪ್ರಸಾದ್ ರ ಹಿನ್ನಲೆಯಲ್ಲಿ ಸಂಘಪರಿವಾರವಿದೆಯೇ ಎಂಬ ಅನುಮಾನಗಳು ದಟ್ಟವಾಗಿದೆ. ಈ ನಿಟ್ಟಿನಲ್ಲೂ ಎಚ್ಚರ ವಹಿಸಬೇಕು ಎನ್ನುವಂತದ್ದು.
ಸಭೆಯಲ್ಲಿ ಕೆ ಎಲ್ ಅಶೋಕ್, ಜನಶಕ್ತಿಯ ಡಾ ಎಚ್ ವಿ ವಾಸು, ಸ್ವರಾಜ್ ಅಭಿಯಾನದ ದೊಡ್ಡಿಪಾಳ್ಯ ನರಸಿಂಹಮೂರ್ತಿ, ರಣಧೀರ ಪಡೆಯ ಹರೀಶ್ ಕುಮಾರ್ ಬಿ, ಸರೋವರ್ ಬೆಂಕಿಕೆರೆ, ಡಿವೈಎಫ್ ಐ ನ ಬಸವರಾಜ್, ಎಸ್ ಎಫ್ ಐ ನ ಗುರುರಾಜ್, ಡಿಡಿಎಚ್ ಎಸ್ ನ ಗೌರಿ, ಡಿಎಸ್ ಎಫ್ ನ ರಾಜಗೋಪಾಲ್, ನವೀನ ಸೂರಂಜೆ, ಮಂಜುಶ್ರಿ, ವಕೀಲರಾದ ಅಖಿಲಾ, ಅನಂತ್ ನಾಯಕ್, ಜನವಾದಿಯ ವಿಮಲಾ, ಕಾವ್ಯ ಮತ್ತಿತರರು ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ಶ್ರೀಪಾದ ಭಟ್ ವಹಿಸಿದ್ದರು.
Comments are closed.