ಕರಾವಳಿ

ಕೊಲೆಯತ್ನ ಪ್ರಕರಣದಲ್ಲಿ ದೋಷಮುಕ್ತಗೊಂಡ ಇಬ್ಬರು ಆರೋಪಿಗಳು ಹಲ್ಲೆ ಪ್ರಕರಣದಲ್ಲಿ ಜೈಲು ಸೇರಿದರು

Pinterest LinkedIn Tumblr

ಮಂಗಳೂರು, ಮೇ 27: 2017ರ ಜನವರಿ ಜ.12ರಂದು ಸೋಮೇಶ್ವರ ಗ್ರಾಮದ ಪೆರಿಬೈಲ್ ಬೀಚ್ ಬಳಿ ನಡೆದ ಹಲ್ಲೆ ಪ್ರಕರಣ ವೊಂದಕ್ಕೆ ಸಂಬಂಧಿಸಿದಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಇಬ್ಬರು ಅಪರಾಧಿಗಳಿಗೆ 26 ದಿನ ಜೈಲು ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿ ಶುಕ್ರವಾರ ತೀರ್ಪು ನೀಡಿದ್ದಾರೆ.

ಆದರೆ ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆಯತ್ನ ಪ್ರಕರಣ ಸಾಕ್ಷ್ಯಾಧಾರದ ಕೊರತೆಯಿಂದ ಖುಲಾಸೆಯಾಗಿದೆ.

ಸೋಮೇಶ್ವರ ದ್ವಾರಕ ನಗರ ಸರಸ್ವತಿ ಕಾಲೋನಿ ನಿವಾಸಿಗಳಾದ ಗುರುರಾಜ್ (25) ಹಾಗೂ ಜಾನ್ ಬ್ಯಾಪ್ಟಿಸ್ಟ್ (22) ಶಿಕ್ಷೆಗೊಳಗಾದ ಅಪರಾಧಿಗಳು.

ದಂಡ ತೆರಲು ತಪ್ಪಿದರೆ ಮತ್ತೆ 3 ತಿಂಗಳು ಸಾದಾ ಶಿಕ್ಷೆ ಅನುಭವಿಸುವಂತೆ ಹಾಗೂ ದಂಡದ ಮೊತ್ತದಲ್ಲಿ ಅರ್ಧದಷ್ಟು ಗಾಯಾಳುವಿಗೆ ಪರಿಹಾರ ರೂಪದಲ್ಲಿ ನೀಡಬೇಕು ಎಂದು ನ್ಯಾಯಾಧೀಶ ಕೆ.ಎಸ್.ಬೀಳಗಿ ತೀರ್ಪಿನಲ್ಲಿ ಆದೇಶಿಸಿದ್ದಾರೆ.

2017ರ ಜನವರಿ 12ರಂದು ಆರೋಪಿಗಳು ಸೋಮೇಶ್ವರ ನಿವಾಸಿ ಮಹಮ್ಮದ್ ಇಕ್ಬಾಲ್ ಎಂಬವರ ಮೇಲೆ ರಾಡ್ ನಿಮದ ಹಲ್ಲೆ ನಡೆಸಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಉಳ್ಳಾಲ ಠಾಣಾ ಎಸ್ಐ ರಾಜೇಂದ್ರ ಬಿ. ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ್ದ ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎಸ್.ಬೀಳಗಿ ಅವರು ಆರೋಪಿಗಳಿಗೆ ಕಲಂ 324 ಮತ್ತು 504ರ ಅಡಿ ಜೈಲುವಾಸ ಮತ್ತು 10 ಸಾವಿರ ರೂ ದಂಡ ವಿಧಿಸಿದ್ದರು.

ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿತ್ತು. ಆದರೆ ಕೊಲೆಯತ್ನ ಪ್ರಕರಣವನ್ನು ಸಾಕ್ಷ್ಯದ ಕೊರತೆಯಿಂದ ಕಲಂ 307ರ ಅಡಿ ನ್ಯಾಯಾಧೀಶರು ದೋಷಮುಕ್ತಗೊಳಿಸಿದ್ದಾರೆ.

ಘಟನೆ ವಿವರ :

ಸೋಮೇಶ್ವರ ಗ್ರಾಮದ ಪೆರಿಬೈಲ್ ಬಳಿ ವಾಲಿಬಾಲ್ ಆಟ ಆಡಲು ತೆರಳಿದ್ದ ಮುಹಮ್ಮದ್ ಇಕ್ಬಾಲ್ ತನ್ನ ಪರಿಚಯದ ಮನ್ಸೂರ್ ಎಂಬವರ ಜತೆ ಮಾತನಾಡುತ್ತಿದ್ದರು. ಈ ಸಂದರ್ಭ ಅಲ್ಲಿಗೆ 2 ಬೈಕ್‌ಗಳಲ್ಲಿ ಆಗಮಿಸಿದ ಗುರುರಾಜ್ ಮತ್ತು ಜಾನ್ ಬ್ಯಾಪ್ಟಿಸ್ಟ್ ಎಂಬವರು ಮುಹಮ್ಮದ್ ಇಕ್ಬಾಲ್‌ರಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದರಲ್ಲದೆ ಇಕ್ಬಾಲ್‌ರನ್ನು ಕೊಲೆ ಮಾಡುವ ಉದ್ದೇಶದಿಂದ ಕಬ್ಬಿಣದ ರಾಡ್‌ನಿಂದ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿದ್ದರು ಎಂದು ದೂರಲಾಗಿತ್ತು.

ಮುಹಮ್ಮದ್ ಇಕ್ಬಾಲ್ ತನ್ನನ್ನು ರಕ್ಷಿಸಿಕೊಳ್ಳಲು ಬೊಬ್ಬೆ ಹೊಡೆದಾಗ ಸ್ಥಳೀಯರು ಓಡಿ ಬರುವುದನ್ನು ಕಂಡು ಆರೋಪಿಗಳು ಪರಾರಿಯಾಗಿದ್ದರು. ಉಳ್ಳಾಲ ಠಾಣೆಯ ಅಂದಿನ ಎಸ್ಸೈ ರಾಜೇಂದ್ರ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಕುದ್ರಿಯ ಪುಷ್ಪರಾಜ ಅಡ್ಯಂತಾಯ ವಾದಿಸಿದ್ದರು.

Comments are closed.