
ಬೆಂಗಳೂರು: ಮಹಿಳೆಯರೇ ಮುನ್ನಡೆಸುತ್ತಿರುವ ಆಲ್ ಇಂಡಿಯಾ ಮಹಿಳಾ ಎಂಪವರ್‌ವೆುಂಟ್ ಪಾರ್ಟಿ (ಎಂಇಪಿ) ಹಾಗೂ ಭಾರತೀಯ ಜನಶಕ್ತಿ ಕಾಂಗ್ರೆಸ್ ಪಾರ್ಟಿಗಳು ಈ ಬಾರಿಯ ಚುನಾವಣಾ ಕಣದಲ್ಲಿ ಸಾಕಷ್ಟು ಸದ್ದು ಮಾಡಿದ್ದವು. ಆದರೆ, 15ನೇ ವಿಧಾನಸಭೆಗೆ ಆಯ್ಕೆಯಾಗಿದ್ದು ಕೇವಲ ಏಳು ಮಂದಿ ಮಹಿಳೆಯರು ಮಾತ್ರ. ಕಳೆದ ಬಾರಿಯೂ ಮಹಿಳಾ ಶಾಸಕಿಯರ ಸಂಖ್ಯೆ ಇಷ್ಟೇ ಇತ್ತು.
ಎಂಇಪಿ ರಾಷ್ಟ್ರೀಯ ಅಧ್ಯಕ್ಷೆ ಡಾ.ನೌಹೀರಾ ಶೇಕ್ ಅಧಿಕಾರ ನಡೆಸಲೆಂದೇ ನಮ್ಮ ಪಕ್ಷ ಕರ್ನಾಟಕದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದು ಎಂದು ಹೇಳಿ 221 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಅದೇ ರೀತಿ ಕಾಂಗ್ರೆಸ್‌ನ ದುರಾಡಳಿತ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಭಾರತೀಯ ಜನಶಕ್ತಿ ಕಾಂಗ್ರೆಸ್ ಪಾರ್ಟಿ ಸ್ಥಾಪಿಸಿ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಸ್ವತಃ ತಾವೂ ಸೇರಿ 19 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಆದರೆ, ಇಬ್ಬರ ಸಾಧನೆ ಶೂನ್ಯ. ಉಳಿದಂತೆ ಈ ಬಾರಿ ವಿಧಾನಸಭೆ ಪ್ರವೇಶಿಸಿದ ಮಹಿಳಾ ಶಾಸಕಿಯರ ಪೈಕಿ ನಿಪ್ಪಾಣಿ ಕ್ಷೇತ್ರದ ಬಿಜೆಪಿ ಶಾಸಕಿ ಶಶಿಕಲಾ ಜೊಲ್ಲೆ ಹೊರತುಪಡಿಸಿದರೆ ಉಳಿದ ಎಲ್ಲರೂ ಮೊದಲ ಬಾರಿ ಶಾಸಕಿಯರಾಗಿ ಆಯ್ಕೆಯಾಗಿದ್ದಾರೆ. ಈ ನಾಲ್ಕು ಮಂದಿ ಕಾಂಗ್ರೆಸ್ ಪಕ್ಷದಿಂದ ಹಾಗೂ ಮೂವರು ಬಿಜೆಪಿಯಿಂದ ಗೆದ್ದಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳ್ಕರ್ ಅವರು ಬೆಳಗಾವಿ ಗ್ರಾಮಾಂತರ, ಸಂಸದ ಕೆ.ಎಚ್.ಮುನಿಯಪ್ಪ ಪುತ್ರಿ ಎಂ.ರೂಪಕಲಾ ಕೆಜಿಎಫ್ ಕ್ಷೇತ್ರದಿಂದ, ಮಾಜಿ ಸಚಿವ ದಿವಂಗತ ಖಮರುಲ್ ಇಸ್ಲಾಂ ಅವರ ಪತ್ನಿ ಕನೀಜ್ ಫಾತಿಮಾ ಕಲಬುರಗಿ ಉತ್ತರ ಕ್ಷೇತ್ರದಿಂದ ಹಾಗೂ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಪತ್ನಿ ಅಂಜಲಿ ನಿಂಬಾಳ್ಕರ್ ಖಾನಾಪುರ ಕ್ಷೇತ್ರದಿಂದ ಹಾಗೂ ಬಿಜೆಪಿಯಿಂದ ಮಾಜಿ ಸಚಿವ ಎ.ಕೃಷ್ಣಪ್ಪ ಪುತ್ರಿ ಆರ್. ಪೂರ್ಣಿಮಾ ಹಿರಿಯೂರು ಕ್ಷೇತ್ರದಿಂದ ಗೆದ್ದ ಪ್ರಮುಖರು. ಉಳಿದಂತೆ ಬಿಜೆಪಿಯಿಂದ ಶಶಿಕಲಾ ಜೊಲ್ಲೆ ನಿಪ್ಪಾಣಿ ಕ್ಷೇತ್ರದಿಂದ ರೂಪಾಲಿ ಸಂತೋಷ್ ನಾಯಕ್ ಕಾರವಾರ ಕ್ಷೇತ್ರದಿಂದ ಗೆದ್ದಿದ್ದಾರೆ.
ಈ ಬಾರಿ ಒಟ್ಟು 217 ಮಹಿಳೆಯರು ಸ್ಪರ್ಧಿಸಿದ್ದರು. ಇದರಲ್ಲಿ ಅತಿ ಹೆಚ್ಚು ಮಹಿಳೆಯರು ಎಂಇಪಿ ಪಕ್ಷದಿಂದ ಸ್ಪರ್ಧಿಸಿದ್ದರು. ಭಾರತೀಯ ಜನಶಕ್ತಿ ಕಾಂಗ್ರೆಸ್ ಪಾರ್ಟಿಯಿಂದ 19, ಕಾಂಗ್ರೆಸ್ ಪಕ್ಷದಿಂದ 13, ಬಿಜೆಪಿಯಿಂದ 6 ಹಾಗೂ ಜೆಡಿಎಸ್‌ನಿಂದ 2 ಮಹಿಳೆಯರಿಗೆ ಟಿಕೆಟ್ ನೀಡಲಾಗಿತ್ತು. ಉಳಿದಂತೆ ಹಲವರು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಗೆದ್ದ ಏಳು ಮಂದಿಯ ಪೈಕಿ ಉಳಿದ ಯಾರೂ ಠೇವಣಿ ಉಳಿಸಿಕೊಂಡಿಲ್ಲ.
ಈವರೆಗಿನ ಮಹಿಳಾ ಶಾಸಕಿಯರು: 1857ರಲ್ಲಿ 13 ಹಾಗೂ 1962ರಲ್ಲಿ 18 ಶಾಸಕಿಯರು ಆಯ್ಕೆಯಾಗಿದ್ದು ಬಿಟ್ಟರೆ, 1989 ಹೊರತುಪಡಿಸಿ 1957ರಿಂದ 2013ರವರೆಗೆ ಶಾಸಕಿಯರ ಸಂಖ್ಯೆ ಎರಡಂಕಿ ದಾಟಿಲ್ಲ. 1989ರಲ್ಲಿ 10 ಮಂದಿ ಮಹಿಳೆಯರು ವಿಧಾನಸಭೆಗೆ ಆಯ್ಕೆಯಾಗಿದ್ದರು.
1972ರಲ್ಲಿ 28 ಮಂದಿ ಮಹಿಳೆಯರು ಸ್ಪರ್ಧಿಸಿದ್ದರೂ ಒಬ್ಬರೂ ಆಯ್ಕೆಯಾಗಿರಲಿಲ್ಲ. ಉಳಿದಂತೆ 1967ರಲ್ಲಿ ಐವರು, 1978ರಲ್ಲಿ 8, 1994ರಲ್ಲಿ 7, 1999ರಲ್ಲಿ 5, 2004ರಲ್ಲಿ 6, 2008ರಲ್ಲಿ 5, 2013ರಲ್ಲಿ 6 ಮಂದಿ ಮಹಿಳೆಯರು ಆಯ್ಕೆಯಾಗಿದ್ದರು. ಗುಂಡ್ಲುಪೇಟೆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಗೀತಾ ಮಹದೇವಪ್ರಸಾದ್ ಶಾಸಕರಾಗಿ ಆಯ್ಕೆಯಾದರು. ಈ ಬಾರಿ ಆವರೂ ಸೋತಿದ್ದಾರೆ.
ಕಾಂಗ್ರೆಸ್ ಮುಖಂಡರು ಬಿಜೆಪಿಯ ಬಿ-ಟೀಂ ಜೆಡಿಎಸ್ ಎಂದು ದೂರಿದ್ದರು. ಈಗ ಅವರೊಂದಿಗೆ ಸೇರಿ ಅಧಿಕಾರ ನಡೆಸಲು ಮುಂದಾಗಿದ್ದಾರೆ. ನೈತಿಕತೆ ಇಲ್ಲದ ಕಾಂಗ್ರೆಸ್.
● ಸಿಟಿ ರವಿ, ಬಿಜೆಪಿ ಮುಖಂಡ
ಕಾಂಗ್ರೆಸ್ ಮುಖಂಡರು ಬಿಜೆಪಿಯ ಬಿ-ಟೀಂ ಜೆಡಿಎಸ್ ಎಂದು ದೂರಿದ್ದರು. ಈಗ ಅವರೊಂದಿಗೆ ಸೇರಿ ಅಧಿಕಾರ ನಡೆಸಲು ಮುಂದಾಗಿದ್ದಾರೆ. ನೈತಿಕತೆ ಇಲ್ಲದ ಕಾಂಗ್ರೆಸ್.
● ಸಿಟಿ ರವಿ, ಬಿಜೆಪಿ ಮುಖಂಡ
ಸಿದ್ದರಾಮಯ್ಯ ಅವರ ಗೆಲುವು ಗೆಲುವಲ್ಲ. ಮೊಳಕಾಲ್ಮೂರು ಕ್ಷೇತ್ರದ ಗೆಲುವನ್ನು ಜನರಿಗೆ ಅರ್ಪಿಸುತ್ತೇನೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಾಗಿದ್ದು, ಈ ಬಗ್ಗೆ ಹೈಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ.
● ಬಿ.ಶ್ರೀರಾಮಲು, ಬಿಜೆಪಿ ಮುಖಂಡ
ಕೋಮುವಾದಿ ಪಕ್ಷವನ್ನು ದೂರ ಇಡಲು ಕಾಂಗ್ರೆಸ್, ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಿದರೆ ತೊಂದರೆಯಿಲ್ಲ.
● ಜಮೀರ್ ಅಹ್ಮದ್, ಕಾಂಗ್ರೆಸ್ ಶಾಸಕ
Comments are closed.