ಕರ್ನಾಟಕ

ನವವಿವಾಹಿತೆ ನೇಣಿಗೆ ಶರಣು

Pinterest LinkedIn Tumblr


ಕೆ.ಆರ್‌.ಪುರ: ಮದುವೆಯಾದ ಮೂರೇ ವಾರಕ್ಕೆ ನವವಿವಾಹಿತೆಯೊಬ್ಬರು ಅನುಮಾನಸ್ಪದ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್‌.ಪುರಂ ಠಾಣೆಯ ರೈಲ್ವೆ ವಸತಿ ಸಮುಚ್ಚಯದಲ್ಲಿ ನಡೆದಿದೆ.

ರಮಿತಾ (21) ಮೃತ ನವವಿವಾಹಿತೆ. ಸಾಫ್ಟ್ವೇರ್‌ ಉದ್ಯೋಗಿ ರಮಿತಾ 21 ದಿನಗಳ ಹಿಂದೆ ರೈಲ್ವೆ ಇಲಾಖೆ ನೌಕರ ನರೇಶ್‌ನನ್ನು ಪ್ರೀತಿಸಿ ವಿವಾಹವಾಗಿದ್ದರು. ಈ ಮಧ್ಯೆ ದಂಪತಿ ನಡುವೆ ಕೆಲ ವಿಚಾರಗಳಲ್ಲಿ ಮನಸ್ತಾಪ ಉಂಟಾಗಿದ್ದು, ಕೌಟುಂಬಿಕ ಕಲಹಕ್ಕೆ ಬೇಸತ್ತ ರಮಿತಾ ಸೋಮವಾರ ನಸುಕಿನ 4 ಗಂಟೆ ಸುಮಾರಿಗೆ ಪತಿಯ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ.

ರಮಿತಾ ತಾಯಿ ರೋಜಾ ಅಳಿಯ ನರೇಶ್‌ ಮತ್ತು ಕುಟುಂಬ ಸದಸ್ಯರ ವಿರುದ್ಧ ಕೊಲೆ ಆರೋಪಿಸಿ ದೂರು ನೀಡಿದ್ದು, ನರೇಶ್‌ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾರತ್‌ಹಳ್ಳಿಯ ಖಾಸಗಿ ಕಂಪನಿಯ ಸಾಫ್ಟ್ವೇರ್‌ ಉದ್ಯೋಗಿ ರಮಿತಾ ರೈಲ್ವೆ ಇಲಾಖೆ ನೌಕರ ನರೇಶ್‌ ಕಾಲೇಜು ದಿನಗಳಿಂದಲೂ ಪರಸ್ಪರ ಪ್ರೀತಿಸುತ್ತಿದ್ದರು.ಇದಕ್ಕೆ ನರೇಶ್‌ ಕುಟುಂಬ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ರಮಿತಾ ತನ್ನ ಪೋಷಕರನ್ನು ಒಪ್ಪಿಸಿ ಮಾ.19ರಂದು ಚಿಕ್ಕತಿರುಪತಿಯಲ್ಲಿ ವಿವಾಹ ಮಾಡಿಕೊಂಡಿದ್ದರು.

ಬಳಿಕ ನರೇಶ್‌ ಕೆ.ಆರ್‌.ಪುರಂನ ರೈಲ್ವೆ ಸಮುಚ್ಚಯದ ಮನೆಗೆ ಪತ್ನಿಯನ್ನು ಕರೆತಂದು ಆರಂಭದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಈ ಮಧ್ಯೆ ಮೂರು ದಿನಗಳ ಹಿಂದೆ ಮನೆಯಲ್ಲಿ ಮನೆಯ ಬೀರುವಿನಲ್ಲಿ ನರೇಶ್‌ ತಾಯಿಯ ಬಟ್ಟೆಯನ್ನು ಖಾಲಿ ಮಾಡುವ ವಿಚಾರಕ್ಕೆ ಗಲಾಟೆ ನಡೆದಿದ್ದು, ಅಷ್ಟೇ ಅಲ್ಲದೇ, ನರೇಶ್‌ ಹಣ ಹಾಗೂ ಒಡವೆ ತರುವಂತೆ ಪತ್ನಿಗೆ ಕಿರುಕುಳ ನೀಡಿದ್ದಾನೆ. ನಿತ್ಯ ಮದ್ಯ ಸೇವಿಸಿ ಬರುತ್ತಿದ್ದ ಆರೋಪಿ ರಮಿತಾಳಿಗೆ ಹಲ್ಲೆ ನಡೆಸುತ್ತಿದ್ದ ಎಂದು ರಮಿತಾ ಪೋಷಕರು ಆರೋಪಿಸಿದ್ದಾರೆ.

ಮರುಮದುವೆ ಸಿದ್ಧತೆ: ಆರೋಪಿ ನರೇಶ್‌ ತನ್ನ ಮಗಳ ರಮಿತಾಳನ್ನು ಪ್ರೀತಿಸುವ ವೇಳೆ ನನಗೆ ತಂದೆ-ತಾಯಿ, ಸಂಬಂಧಿಕರು ಯಾರು ಇಲ್ಲ ಎಂದಿದ್ದ. ಹೀಗಾಗಿ ನಾನೇ ಮುಂದೆ ನಿಂತು ಚಿಕ್ಕತಿರುಪತಿಯಲ್ಲಿ ವಿವಾಹ ಮಾಡಿಸಿದ್ದೆ. ತದನಂತರ ಪ್ರತಿಷ್ಠಿತ ತಾಜ್‌ ವಿವಾಂತ್‌ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಮಾಡಿಕೊಡಲಾಗಿತ್ತು.

ಆದರೂ ನರೇಶ್‌ ತನ್ನ ಚಿಕ್ಕಪ್ಪ, ಚಿಕ್ಕಮ್ಮನೊಂದಿಗೆ ನನ್ನ ಪುತ್ರಿಗೆ ಕಿರುಕುಳ ನೀಡಿ ಕೊಲೆಗೈದಿದ್ದಾರೆ. ಅಷ್ಟೇ ಅಲ್ಲದೇ, ಆತನ ಮನೆಯವರು ಇದೇ ತಿಂಗಳ 29 ರಂದು ಇನ್ನೊಂದು ಯುವತಿ ಜತೆ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದರು ಎಂದು ರಮಿತಾ ತಾಯಿ ರೋಜಾ ಆರೋಪಿಸಿದ್ದಾರೆ.

-ಉದಯವಾಣಿ

Comments are closed.