ಮುಂಬೈ

ರೇಪ್‌ ಬಗ್ಗೆ ತಡವಾಗಿ ದೂರು ನೀಡಿದರೆ ಸುಳ್ಳೆಂದು ಅರ್ಥವಲ್ಲ: ಹೈಕೋರ್ಟ್

Pinterest LinkedIn Tumblr


ಮುಂಬಯಿ: ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿ ಮಹಿಳೆ ವಿಳಂಬವಾಗಿ ದೂರು ನೀಡಿದಳೆಂದರೆ ಅದು ಸುಳ್ಳು ಎಂದು ಅರ್ಥವಲ್ಲ ಎಂದು ಬಾಂಬೆ ಹೈಕೋರ್ಟ್‌ ಹೇಳಿದೆ.

ಅತ್ಯಾಚಾರ ಪ್ರಕರಣವೊಂದರಲ್ಲಿ 10 ವರ್ಷ ಜೈಲು ಶಿಕ್ಷೆ ವಿಧಿಸಿದ ಸೆಷನ್ಸ್‌ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ನಾಲ್ವರು ಆರೋಪಿಗಳು ಸಲ್ಲಿಸಿದ ಮೇಲ್ಮನವಿಯನ್ನು ತಳ್ಳಿ ಹಾಕಿದ ನ್ಯಾಯಮೂರ್ತಿ ಎ.ಎಂ. ಬಾದರ್‌ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತೀಯ ಮಹಿಳೆಯರು ಸಾಮಾನ್ಯವಾಗಿ ಸುಳ್ಳು ಆಪಾದನೆಗಳನ್ನು ಮಾಡುವುದಿಲ್ಲ ಎಂದು ನ್ಯಾಯಮೂರ್ತಿ ಅಭಿಪ್ರಾಯಪಟ್ಟರು.

2012ರ ಮಾರ್ಚ್‌ 15ರಂದು ನಾಸಿಕ್‌ ಜಿಲ್ಲೆಯ ತ್ರಯಂಬಕೇಶ್ವರಕ್ಕೆ ಹೋಗಿ ಮರಳಿ ಬರುತ್ತಿದ್ದಾಗ ಯುವತಿಯ ಸ್ನೇಹಿತನಿಗೆ ಹಲ್ಲೆ ನಡೆಸಿ ಸಾಮೂಹಿಕ ಅತ್ಯಾಚಾರ ಮಾಡಲಾಗಿತ್ತು. ಎರಡು ದಿನಗಳ ಬಳಿಕ ಆಕೆ ದೂರು ನೀಡಿದ್ದರು. ನ್ಯಾಯಾಲಯ ನಾಲ್ವರಿಗೆ ಶಿಕ್ಷೆ ವಿಧಿಸಿತ್ತು.

ಯುವತಿ ಮತ್ತು ಸ್ನೇಹಿತ ಅಸಭ್ಯವಾಗಿ ವರ್ತಿಸುತ್ತಿದ್ದುದನ್ನು ಪ್ರಶ್ನಿಸಿದ್ದಕ್ಕಾಗಿ ತಮ್ಮ ಮೇಲೆ ದೂರು ನೀಡಲಾಗಿದೆ, ವೈದ್ಯಕೀಯ ಪರೀಕ್ಷೆ ವೇಳೆ ಯುವತಿಯ ಮೈಮೇಲೆ ಯಾವುದೇ ಗಾಯದ ಗುರುತು ಇಲ್ಲದಿರುವುದನ್ನು ಗಮನಿಸಿ ಅತ್ಯಾಚಾರದ ಸಾಧ್ಯತೆಯನ್ನು ತಳ್ಳಿ ಹಾಕಲಾಗಿದೆ ಎನ್ನುವುದು ಶಿಕ್ಷೆಗೊಳಗಾದವರ ವಾದವಾಗಿತ್ತು. ಆದರೆ, ಹೈಕೋರ್ಟ್‌ ಕೂಡಾ ಅವರ ವಾದವನ್ನು ಒಪ್ಪಲಿಲ್ಲ.

Comments are closed.