ರಾಷ್ಟ್ರೀಯ

ಕೋಟ್ಯಂತರ ರೂಪಾಯಿ ಬ್ಯಾಂಕಿಗೆ ವಂಚಿಸಿದ ನೀರವ್ ಮೋದಿ ಬ್ಯಾಂಕ್ ಅಧಿಕಾರಿಗಳಿಗೆ ಏನೆಲ್ಲ ಲಂಚವಾಗಿ ನೀಡಿದ್ದರು ಗೊತ್ತೇ…?

Pinterest LinkedIn Tumblr

ಮುಂಬೈ/ನವದೆಹಲಿ: ಕೋಟ್ಯಂತರ ರೂಪಾಯಿ ಬ್ಯಾಂಕಿಗೆ ವಂಚಿಸಿದ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಅಧಿಕಾರಿಗಳಿಗೆ ಚಿನ್ನ, ವಜ್ರವನ್ನು ಲಂಚವಾಗಿ ನೀಡಿದ್ದರು ಎಂದು ಸಿಬಿಐ ನ್ಯಾಯಾಲಯಕ್ಕೆ ಹೇಳಿದೆ.

ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಸಿಬಿಐ ಈಗಾಗಲೇ 14 ಮಂದಿಯನ್ನು ಬಂಧಿಸಿದ್ದು, ನೀರವ್ ಮೋದಿ ಬ್ಯಾಂಕಿನ ಅಧಿಕಾರಿಗಳಿಗೆ ಲಂಚ ನೀಡಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಮುಂಬೈ ಶಾಖೆಯ ವಿದೇಶಿ ವಿನಿಮಯ ಶಾಖೆಯ ವ್ಯವಸ್ಥಾಪಕರಾಗಿದ್ದ ಯಶವಂತ್ ಜೋಷಿ ಅವರ ಹೆಸರು ಹಗರಣದಲ್ಲಿ ಮುಖ್ಯವಾಗಿ ಕೇಳಿಬರುತ್ತಿದ್ದು 60 ಗ್ರಾಂ ತೂಕದ ಎರಡು ಚಿನ್ನದ ನಾಣ್ಯ ಮತ್ತು ವಜ್ರದ ಕಿವಿಯ ಓಲೆ ಲಂಚವಾಗಿ ಪಡೆದುಕೊಂಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಸಿಬಿಐ ಕೋರ್ಟ್ ಗೆ ಹೇಳಿದೆ.

ಸ್ವತಂತ್ರ ಸಾಕ್ಷಿಗಳ ಸಮ್ಮುಖದಲ್ಲಿ ಚಿನ್ನ, ವಜ್ರಗಳನ್ನು ಜೋಷಿಯವರ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ಹೇಳಿದೆ.

ತನಿಖಾಧಿಕಾರಿಗಳಿಗೆ ಇನ್ನೂ ನೀರವ್ ಮೋದಿ ಸಿಕ್ಕಿಲ್ಲ. ಆದರೆ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ ನೀರವ್ ಮೋದಿ ಹಾಂಗ್ ಕಾಂಗ್ ನಲ್ಲಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಜಾರಿ ನಿರ್ದೇಶನಾಲಯ ಈಗಾಗಲೇ ಮೋದಿ ಮತ್ತು ಅವರ ಸಂಬಂಧಿಕ ಚೊಕ್ಸಿಗೆ ಸೇರಿದ ಅನೇಕ ಆಸ್ತಿಪಾಸ್ತಿಗಳನ್ನು ವಶಪಡಿಸಿಕೊಂಡಿದೆ.

Comments are closed.