ಉಡುಪಿ: ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಹಂಗಾರಕಟ್ಟೆ ಐರೋಡಿಯ ಬಾಳ್ಕುದ್ರು ಎನ್ನುವಲ್ಲಿರುವ ಶ್ರೀ ದುರ್ಗಾಪರಮೇಶ್ವರೀ ಹಾಗೂ ಗದ್ದುಗೆ ಅಮ್ಮನವರು ಮತ್ತು ಪಂಜುರ್ಲಿ ಸನ್ನಿಧಿ ಸಮೀಪದ ರಸ್ತೆಯಲ್ಲಿ ವಿಚಿತ್ರ ಹೆಜ್ಜೆ ಗುರುತುಗಳು ಕಾಣಿಕೊಂಡಿದ್ದು ಜನರಲ್ಲಿ ಕೌತುಕ ಮೂಡಿಸಿದೆ.
ಶುಕ್ರವಾರ ರಾತ್ರಿ ಉತ್ತರ ಪ್ರದೇಶದ ಕಾರ್ಮಿಕರು ಮೊದಲಾಗಿ ಈ ವಿಚಿತ್ರ ಪಾದದ ಗುರುತು ಕಂಡು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಸುಮಾರು ಅರ್ಧ ಕಿ.ಮೀ. ವ್ಯಾಪ್ತಿಯ ಟಾರ್ ರಸ್ತೆ ಬದಿಯಲ್ಲಿ ಅಂದಾಜು ನಾಲ್ಕೈದು ಇಂಚು ಉದ್ದದ ಪಾದದ ಗುರುಗಳು ಕಾಣಸಿಕ್ಕಿದೆ. ಎಣ್ಣೆ ಅಥವಾ ದ್ರವ ಅಂಶದಂತಿರುವ ವಸ್ತುವಾದ ಕಾರಣ ಹೆಜ್ಜೆ ಗುರುತು ರಸ್ತೆಯಲ್ಲಿ ಮೂಡಿದೆ. ಬೆರಳುಗಳು ಮಾತ್ರ ಈ ಹೆಜ್ಜೆ ಗುರುತಿನಲ್ಲಿ ಕಾಣಸಿಕ್ಕಿಲ್ಲ.

ಒಂದಷ್ಟು ಕುತೂಹಲ..ಒಂದಷ್ಟು ಭಯ..!
ಕಳೆದ ಇಪ್ಪತ್ತು ದಿನಗಳ ಹಿಂದಷ್ಟೇ ಈ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಟೆ, ಹೋಮ ಹವನಾಧಿ ಕಾರ್ಯಗಳು ನಡೆದಿತ್ತು. ಈ ಹೋಮದ ಬಳಿಕ ಈ ಘಟನೆ ನಡೆದಿದ್ದರಿಂದ ಜನರು ಒಂದಷ್ಟು ಭಯಭೀತರಾಗಿದ್ದಾರೆ. ಯಾವುದೇ ಮನುಷ್ಯನ ಹೆಜ್ಜೆ ಗುರುತು ಇದಲ್ಲ ಎಂಬುದು ಕೆಲವರ ಅಭಿಪ್ರಾಯವಾಗಿದೆ.
‘ದೇವರ ಹೆಜ್ಜೆ’…?
ಈ ಭಾಗದಲ್ಲಿ ಕೆಲವು ಸಮಯಗಳಿಂದ ಅನ್ಯ ಭಾಗದಿಂದ ಕೆಲಸ ನಿಮಿತ್ತ ಬಂದ ವಲಸೆ ಕಾರ್ಮಿಕರು ರೀತಿ ರಿವಾಜುಗಳನು ಅನುಸರಿಸುತ್ತಿಲ್ಲ. ಶೌಚ ಕಾರ್ಯಗಳನ್ನು ರಸ್ತೆಯಲ್ಲಿ ಮಾಡಿ ಅಪಚಾರ ಮಾಡಿದ್ದರೆಂದು ದೇವರು ಮುನಿದಿರಬಹುದು. ಅದಕ್ಕಾಗಿಯೇ ರಾತ್ರಿ ಅವರಿಗೆ ಇಂತಹ ಆಕ್ರತಿ ಸ್ಪಷ್ಟವಾಗಿ ಗೋಚರಿಸಿ ಭಯಗೊಳಿಸಿದೆ ಎಂಬುದು ಇಲ್ಲಿನ ಹಿರಿಯರ ಅಭಿಪ್ರಾಯವಾಗಿದೆ.
ಅನ್ಯಗ್ರಹಜೀವಿ ಇರಬಹುದೇ..?
ಹೆಜ್ಜೆ ಗುರುತುಗಳನ್ನು ಗಮನಿಸಿದರೇ ಸಣ್ಣ ಆಕ್ರತಿಯಲ್ಲಿದೆ. ಮತ್ತು ಹೆಜ್ಜೆ ಗುರುತುಗಳು ಒಂದಕ್ಕೊಂದು ಹತ್ತಿರವಿರುವ ಕಾರಣ ಯಾವುದೇ ಸಣ್ಣ ಜೀವಿಯದ್ದಾಗಿರಬಹುದೆಂದು ಅಂದಾಜಿಸಲಾಗುತ್ತಿದೆ. ಈ ಭಾಗದಲ್ಲಿನ ಕೆಲವು ಜನರ ಪ್ರಕಾರ ಅನ್ಯಗ್ರಹ ಜೀವಿ (ಏಲಿಯನ್) ಇರಲು ಬಹುದೆಂಬ ಮಾತುಗಳು ಕೇಳಿಬರುತ್ತಿದೆ. ಅಥವಾ ಯಾರಾದರೂ ಎಣ್ಣೆ ಅಂಶವುಳ್ಳ ಸಾಕ್ಸ್ (ಕಾಲುಚೀಲ) ಬಳಸಿ ನಡೆದಿರಬಹುದೇ ಎಂಬ ಶಂಕೆಯೂ ವ್ಯಕ್ತವಾಗುತ್ತಿದೆ.
ನೂರಾರು ಸಂಖ್ಯೆಯಲ್ಲಿ ಜನರು!
ರಾತ್ರಿ ಘಟನೆ ನಡೆದಿದ್ದು ಬೆಳಗ್ಗಾಗುತ್ತಿದ್ದಂತೆಯೇ ಈ ವಿಚಾರ ಊರಿಗೆ ಹಬ್ಬಿದೆ. ಈ ವಿಚಿತ್ರವನ್ನು ಗಮನಿಸಲು ಊರ-ಪರವೂರ ಸಹಸ್ರಾರು ಜನರು ಆಗಮಿಸಿ ಅಚ್ಚರಿಪಟ್ಟರು.
ಶನಿವಾರ ಮಧ್ಯಾಹ್ನದ ಸುಮಾರಿಗೆ ಬಿಸಿಲಿನ ಝಳಕ್ಕೆ ಹೆಜ್ಜೆ ಗುರುತುಗಳು ಮಾಯವಾಗಿತ್ತು. ಒಟ್ಟಿನಲ್ಲಿ ಬುದ್ದಿವಂತರ ಜಿಲ್ಲೆ ಉಡುಪಿಯಲ್ಲಿ ಇಂತಹದ್ದೊಂದು ವಿಚಿತ್ರ ನಡೆದಿರುವುದು ಎಲ್ಲರ ಕೌತುಕಕ್ಕೆ ಕಾರಣವಾಗಿದ್ದಂತೂ ಮಾತ್ರ ಸುಳ್ಳಲ್ಲ. ಈ ವಿಚಿತ್ರ ‘ಹೆಜ್ಜೆ ಗುರುತು’ ಏನೆಂಬುದು ಮಾತ್ರ ನಿಗೂಢವೇ ಆಗಿದೆ.
ವರದಿ- ಯೋಗೀಶ್ ಕುಂಭಾಸಿ
Comments are closed.