ಮನೋರಂಜನೆ

ಮಲಯಾಳಂ ‘ಸೂಪರ್ ಸ್ಟಾರ್’ ಮಮ್ಮೂಟ್ಟಿ ಭೇಟಿ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು ?

Pinterest LinkedIn Tumblr

ಬೆಂಗಳೂರು: ನಟ ‘ಕಿಚ್ಚ’ ಸುದೀಪ್ ಮತ್ತು ಅವರ ಪತ್ನಿ ಪ್ರಿಯಾ ಈಚೆಗೆ ಮಲಯಾಳಂ ‘ಸೂಪರ್ ಸ್ಟಾರ್’ ಮಮ್ಮೂಟ್ಟಿ ಅವರನ್ನು ಭೇಟಿಯಾಗಿದ್ದರು. ಆ ಸಂಭ್ರಮದ ಕ್ಷಣವನ್ನು ಟ್ವಿಟರ್​ನಲ್ಲೂ ಹಂಚಿಕೊಂಡಿದ್ದರು ಪ್ರಿಯಾ. ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಪೋಸ್ಟ್ ಆಗಿದ್ದೇ ತಡ ಮಮ್ಮೂಟ್ಟಿ ಜತೆಗೆ ಸುದೀಪ್ ಸಿನಿಮಾ ಮಾಡಲಿದ್ದಾರೆ, ಹಿಂದಿ, ತೆಲುಗು, ತಮಿಳು ನಂತರ ಈಗ ಮಲಯಾಳಂಗೂ ಅವರು ಎಂಟ್ರಿ ನೀಡಲಿದ್ದಾರೆ ಎಂಬ ವದಂತಿ ಜೋರಾಗಿ ಹಬ್ಬಿತ್ತು. ಆದರೆ, ಇದೆಲ್ಲದಕ್ಕೂ ಸುದೀಪ್ ಉತ್ತರ ನೀಡಿದ್ದು, ‘ಈ ಸುದ್ದಿ ಸುಳ್ಳು’ ಎಂದು ವದಂತಿಗೆ ಬ್ರೇಕ್ ಹಾಕಿದ್ದಾರೆ.

‘ಮಮ್ಮೂಟ್ಟಿ ಅವರೊಂದಿಗೆ ಭೇಟಿ ಪೂರ್ವನಿರ್ಧರಿತವಲ್ಲ. ಅಕಸ್ಮಾತ್ ಆಗಿ ಅವರ ಭೇಟಿ ಆಯಿತು. ಇದರ ಹಿಂದೆ ಯಾವುದೇ ಉದ್ದೇಶಗಳಿಲ್ಲ. ಜತೆಗೆ ಸಿನಿಮಾ ಮಾಡುವ ಯಾವ ಆಲೋಚನೆಗಳಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಹಿಂದೆ ಬಾಲಿವುಡ್​ನಲ್ಲಿ ಅಮಿತಾಭ್ ಬಚ್ಚನ್ ಜತೆ ಕಿಚ್ಚ ಸ್ಕ್ರೀನ್ ಶೇರ್ ಮಾಡಿದ್ದಾರೆ. ‘ಮೆಗಾ ಸ್ಟಾರ್’ ಚಿರಂಜೀವಿ ಅವರೊಂದಿಗೆ ‘ಸೈ ರಾ ನರಸಿಂಹ ರೆಡ್ಡಿ’ ಚಿತ್ರದಲ್ಲೂ ಅವರು ನಟಿಸಲಿದ್ದಾರೆ ಎಂಬ ಮಾತಿದೆ. ಈ ಮಧ್ಯೆ ಧನುಷ್ ನಿರ್ದೇಶನದ ಪೌರಾಣಿಕ ಸಿನಿಮಾವೊಂದರಲ್ಲಿ ಸುದೀಪ್ ಬಣ್ಣ ಹಚ್ಚಲಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು. ಹಾಗಾಗಿ, ಸಹಜವಾಗಿಯೇ ಮಮ್ಮೂಟ್ಟಿ ಜತೆಗಿನ ಸುದೀಪ್ ಫೋಟೋ ಕುರಿತು ಗಾಸಿಪ್ ಹಬ್ಬಿತ್ತು. ಸದ್ಯ ‘ಪೈಲ್ವಾನ್’ ಚಿತ್ರಕ್ಕಾಗಿ ದೇಹ ದಂಡಿಸುವ ಕೆಲಸದಲ್ಲೂ ಮಗ್ನರಾಗಿದ್ದಾರೆ ಕಿಚ್ಚ. ಜತೆಗೆ ಮಾರ್ಚ್ 2ರಂದು ‘ಕೋಟಿಗೊಬ್ಬ 3’ ಚಿತ್ರದ ಮುಹೂರ್ತ ಕೂಡ ನೆರವೇರಲಿದೆಯಂತೆ. ಸೂರಪ್ಪ ಬಾಬು ಈ ಚಿತ್ರದ ನಿರ್ವಪಕರು.

Comments are closed.