
ಬಿಗ್ ಬಾಸ್ ಸೀಸನ್ 5ರಲ್ಲಿ ಚೆಲ್ಲುಚೆಲ್ಲಾಗಿ ಮಾತನಾಡುತ್ತಾ ಎಲ್ಲರ ಮೆಚ್ಚುಗೆ ಗಳಿಸಿದ ಸ್ಪರ್ಧಿಗಳಲ್ಲಿ ನಿವೇದಿತಾ ಗೌಡ ಸಹ ಒಬ್ಬರು. ಬಿಗ್ ಬಾಸ್ ಮನೆಯಲ್ಲಿ ಟಾಪ್ ಐದು ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಡಬ್ಸ್ಸ್ಮಾಶ್ ವೀಡಿಯೋಗಳಿಂದ ಜನಪ್ರಿಯರಾಗಿದ್ದ 19ರ ಹರೆಯದ ನಿವೇದಿತಾ ಬಿಗ್ ಬಾಸ್ ಮನೆಯಲ್ಲಿ ಬಾರ್ಬಿಡಾಲ್ ಎಂದೇ ಎಲ್ಲರಿಂದ ಕರೆಸಿಕೊಂಡಿದ್ದರು.
ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಸ್ಯಾಂಡಲ್ವುಡ್ ನಿರ್ಮಾಪಕರು ನಿವೇದಿತಾ ಮನೆಗೆ ಮುಗಿಬಿದ್ದಿದ್ದಾರೆ. ಆದರೆ ನಿವೇದಿತಾ ಮಾತ್ರ ಉಳಿದ ಸ್ಪರ್ಧಿಗಳಂತೆ ಸಿಕ್ಕಸಿಕ್ಕ ಆಫರ್ ಒಪ್ಪಿಕೊಂಡಿಲ್ಲ. ಸಾಕಷ್ಟು ಆಫರ್ಗಳು ಬರುತ್ತಿದ್ದರೂ ಇನ್ನೂ ಯಾವುದನ್ನೂ ಒಪ್ಪಿಕೊಂಡಿಲ್ಲವಂತೆ ನಿವೇದಿತಾ.
‘ಹೌದು ನಿವೇದಿತಾಗೆ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಆದರೆ ಸಮಯದ ಕಾರಣ ಅವರು ಇನ್ನೂ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಅವರ ಮೊದಲ ಆದ್ಯತೆ ಶಿಕ್ಷಣ. ಇನ್ನೂ ಈಗ ಎರಡನೇ ವರ್ಷದ ಬಿಸಿಎ ಓದುತ್ತಿದ್ದಾರೆ. ಪದವಿ ಮುಗಿದ ಬಳಿಕ ಮುಂದೆ ಆಲೋಚಿಸುತ್ತಾರೆ’ ಎಂದಿದ್ದಾರೆ ನಿವೇದಿತಾ ತಾಯಿ ಹೇಮಾ ರಮೇಶ್.
ಬಿಗ್ ಬಾಸ್ ಮನೆಯಿಂದ ಹಿಂತಿರುಗಿದ ಬಳಿಕ ಅವರ ನೀವೇದಿತಾ ಜೀವನ ಹೇಗಿದೆ? ಎಂಬ ಪ್ರಶ್ನೆಗೆ ಉತ್ತರಿಸಿದ ಹೇಮಾ ಅವರು, ‘ಇನ್ನೇನು ಪರೀಕ್ಷೆಗಳು ಆರಂಭವಾಗುತ್ತಿರುವ ಕಾರಣ ಮನೆ ಬಿಟ್ರೆ ಕಾಲೇಜು, ಕಾಲೇಜು ಬಿಟ್ಟರೆ ಮನೆ ಅಷ್ಟೇ. ಯಾಕೆಂದರೆ ಅಟೆಂಡೆನ್ಸ್ ಶಾರ್ಟೇಜ್ ಆಗಬಾರದಲ್ಲವೇ. ಮನೆಗೆ ಬರುವ ಸಂಬಂಧಿಕರು, ಗೆಳೆಯರನ್ನಂತೂ ರಂಜಿಸುತ್ತಲೇ ಇದ್ದಾಳೆ. ನಾವೆಲ್ಲಾ ಇನ್ನೂ ಅದೇ ಗುಂಗಿನಲ್ಲಿ ಇದ್ದೇವೆ. ಈ ಬಗ್ಗೆ ನಮ್ಮದೇನು ತಕರಾರಿಲ್ಲ’ ಎಂದಿದ್ದಾರೆ ಹೇಮಾ.
Comments are closed.