ಗಲ್ಫ್

ದುಬೈಯಿಂದ ಹೊರಟ ವಿಮಾನ ಅರ್ಧ ದಾರಿಯಲ್ಲೇ ಇಳಿದ ಪ್ರಸಂಗ ! ಕಾರಣ ಕೇಳಿದ್ರೆ ಬಿದ್ದು ಬಿದ್ದು ನಗ್ತೀರಾ !

Pinterest LinkedIn Tumblr

ಹೊಸದಿಲ್ಲಿ: ‘ಹಮ್‌ ದಿಲ್‌ ದೇ ಚುಕೇ ಸನಂ’ ಚಿತ್ರದಲ್ಲಿ ಸಲ್ಮಾನ್‌ ಖಾನ್‌ ಮಾಡಿದ್ರೆ ನಮಗೆ ನಗು ಬರುತ್ತೆ. ತ್ರೀ ಈಡಿಯೆಟ್ಸ್‌ನಲ್ಲಿ ಓಮಿ ವೈದ್ಯ ಬಿಟ್ಟ ಗಾಳಿಗೆ ಇಡೀ ಕ್ಲಾಸೇ ಸೈಲೆಂಟ್‌ ಆಗಿ ಹೋದಾಗ ಮುಸಿ ಮುಸಿ ನಗುತ್ತೇವೆ. ದೇಹದ ಒಂದು ಸಾಮಾನ್ಯ ಪ್ರಕ್ರಿಯೆ ಸಿನಿಮಾದಲ್ಲಿ ನಮಗೆ ಹಾಸ್ಯದ ವಸ್ತುವಾಗಬಹುದಾದರೂ ನಿಜ ಜೀವನದಲ್ಲಿ ತುಂಬ ಮುಜುಗರ ಉಂಟಾಗುತ್ತದೆ!

ಇದು ಸಹಜ ಅಪಾನವಾಯು ಕಥನ. ಗ್ಯಾಸ್‌ ಟ್ರಬಲ್‌ ಅಂತಾನೂ ಹೇಳಬಹುದು. ಈ ಗ್ಯಾಸ್‌ ಸಮಸ್ಯೆ ವಿಮಾನದಲ್ಲಿ ಪ್ರಯಾಣಿಕರ ನಡುವೆ ಭಾರಿ ಜಗಳಕ್ಕೆ ಕಾರಣವಾಗಿ, ವಿಮಾನವನ್ನು ಅರ್ಧ ದಾರಿಯಲ್ಲೇ ಇಳಿಸಬೇಕಾದ ಪ್ರಸಂಗ ಎದುರಾಯಿತು ಅಂದರೆ ನೀವು ನಂಬ್ತೀರಾ?

ದುಬೈಯಿಂದ ಆ್ಯಮ್‌ಸ್ಟರ್‌ಡಮ್‌ಗೆ ಹಾರುತ್ತಿದ್ದ ಕಡಿಮೆ ದರದ ಡಚ್‌ ಏರ್‌ಲೈನ್ಸ್‌ಗೆ ಸೇರಿದ ವಿಮಾನದಲ್ಲಿ ಪ್ರಯಾಣಿಕರೊಬ್ಬರ ‘ಗಾಳಿ ದಾಳಿ’ ತಡೆಯಲಾಗದೆ ಸಹಪ್ರಯಾಣಿಕರು ಜಗಳಕ್ಕೇ ಇಳಿದುಬಿಟ್ಟರಂತೆ. ‘ಅವ್ಯಾಹತ ದಾಳಿ’ಗೆ ಸಿಟ್ಟುಗೊಂಡ ಸಹಪ್ರಯಾಣಿಕರು ಮೊದಲು ಜಗಳವಾಡಿದರು. ಬಳಿಕ ವಿಮಾನದ ಸಿಬ್ಬಂದಿ ಮಧ್ಯ ಪ್ರವೇಶ ಮಾಡಿ ‘ಸ್ವಲ್ಪ ತಡ್ಕೊಳ್ಳಪ್ಪ’ ಅಂತ ಮನವಿ ಮಾಡಿದರು. ಆದರೆ, ವಾಯು ದಾಳಿ ನಿಲ್ಲಲೇ ಇಲ್ಲ. ಸಾಮಾನ್ಯವಾಗಿ ಅತಿಯಾದ ತಿನ್ನುವಿಕೆ ಇಲ್ಲವೇ ಆರೋಗ್ಯ ಸಮಸ್ಯೆಯಿಂದ ಅಪಾನವಾಯು ಹೆಚ್ಚಾಗುತ್ತದೆ. ಇಲ್ಲಿ ಪ್ರಯಾಣಿಕನಿಗೆ ಏನು ಸಮಸ್ಯೆಯೋ ಗೊತ್ತಿಲ್ಲ. ಅಂತೂ ಗಾಳಿ ನಿಲ್ಲಲೇ ಇಲ್ಲ.

ಕೊನೆಗೆ ವಿಮಾನವನ್ನು ವಿಯೆನ್ನಾದಲ್ಲಿ ಇಳಿಸಬೇಕಾಯಿತು. ಆಗ ಡಚ್‌ ಪೊಲೀಸರು ಬಂದು ಜಗಳವಾಡಿದ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರನ್ನು ವಿಮಾನದಿಂದ ಇಳಿಸಿದರು. ಈ ನಡುವೆ, ಇಬ್ಬರು ಮಹಿಳೆಯರು ತಮ್ಮನ್ನು ವಿಮಾನದಿಂದ ಇಳಿಸಿ ಅಪಮಾನ ಮಾಡಲಾಯಿತು ಎಂದು ಕೋರ್ಟ್‌ ಮೆಟ್ಟಿಲು ಹತ್ತುವುದಾಗಿ ಎಚ್ಚರಿಸಿದ್ದಾರೆ.

ಪೊಲೀಸರ ಪ್ರಕಾರ, ವಿವಾದಿತ ಪ್ರಯಾಣಿಕ ಆಗಾಗ ನುಗ್ಗಿ ಬರುತ್ತಿದ್ದ ಅಪಾನವಾಯುವನ್ನು ತಡೆಯಲು ಯಾವುದೇ ಪ್ರಯತ್ನ ಮಾಡಿರಲಿಲ್ಲವಂತೆ!

Comments are closed.