ರಾಷ್ಟ್ರೀಯ

ಕಾವೇರಿ ತೀರ್ಪು: ತಮಿಳರಿಗೆ ‘ಆಘಾತ’, ಎರಡೂ ರಾಜ್ಯದ ರೈತರು ಒಂದಾಗಲು ಕಮಲ್‌ ಕರೆ

Pinterest LinkedIn Tumblr


ಚೆನ್ನೈ: ಸುಪ್ರೀಂ ಕೋರ್ಟ್‌ ಕಾವೇರಿ ನೀರಿನ ಕುರಿತು ನೀಡಿದ ತೀರ್ಪು ರಾಜ್ಯದ ರೈತರಲ್ಲಿ ಸಂತಸ ತಂದರೆ ತಮಿಳುನಾಡು ಈ ತೀರ್ಪಿನ ವಿರುದ್ಧ ಕಿಡಿಕಾರಿದೆ. ಸುಪ್ರೀಂ ತೀರ್ಪಿನ ಕುರಿತು ತಮಿಳುನಾಡಿನ ರಾಜಕೀಯ ಪಕ್ಷಗಳು ಆಘಾತ ವ್ಯಕ್ತಪಡಿಸಿವೆ.

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಪ್ರಕಟಿಸಿರುವ ಅಂತಿಮ ತೀರ್ಪಿನಿಂದ ಕರ್ನಾಟಕ ಒಂದು ಮಟ್ಟಿಗೆ ನಿರಾಳವಾಗಿದೆ. ತೀರ್ಪಿನಲ್ಲಿ ತಮಿಳುನಾಡಿಗೆ ಹರಿಸುವ ನೀರಿನಲ್ಲಿ 14.5 ಟಿಎಂಸಿ ಕಡಿತಗೊಳಿಸಿ ಕೋರ್ಟ್‌ ಆದೇಶ ನೀಡಿದೆ. ಬೆಂಗಳೂರಿಗೆ ಹೆಚ್ಚುವರಿಯಾಗಿ 4.75ಟಿಎಂಸಿ ನೀರು ಕುಡಿಯುವುದಕ್ಕೆ ಬಳಸಬಹುದು ಎಂದು ಪೀಠವು ಹೇಳಿದೆ.

ಈ ಆದೇಶ ತಮಿಳುನಾಡಿನ ರಾಜಕೀಯದಲ್ಲಿ ತಲ್ಲಣ ಮೂಡಿಸಿದ್ದು, ‘ ಈ ತೀರ್ಪಿನಿಂದ ನಮಗೆ ಹಿನ್ನಡೆಯಾಗಿದ್ದು, ಸುಪ್ರೀಂನ ಆದೇಶವನ್ನು ಸಂಪೂರ್ಣವಾಗಿ ಅಭ್ಯಸಿಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಎಐಎಡಿಎಂಕೆ ರಾಜ್ಯಸಭೆ ಸದಸ್ಯ ನವನೀತಾಕೃಷ್ಣನ್ ತೀರ್ಪಿನ ಕೆಲವು ನಿಮಿಷಗಳ ನಂತರ ದಿಲ್ಲಿಯಲ್ಲಿ ತಿಳಿಸಿದ್ದಾರೆ.

ಇದೇ ವೇಳೆ ತಮಿಳುನಾಡಿನಲ್ಲಿ ನೂತನವಾಗಿ ರಾಜಕೀಯಕ್ಕೆ ಎಂಟ್ರಿಕೊಡುತ್ತಿರುವ ನಟ ಕಮಲ್‌ ಹಾಸನ್‌, ತಮಿಳುನಾಡುಗೆ ನೀರಿನ ಹಂಚಿಕೆ ಖಂಡಿತವಾಗಿ ನಿರಾಶಾದಾಯಕವಾಗಿದೆ, ಆದರೆ ರಾಜಕೀಯ ಪಕ್ಷಗಳು ಇದನ್ನೇ ಮತಬ್ಯಾಂಕ್‌ ರೀತಿ ನೋಡಬಾರದು’ಎಂದು ಹೇಳಿದ್ದಾರೆ.

ಕರ್ನಾಟಕ ಹಾಗೂ ತ.ನಾಡು ರೈತರು ಒಂದಾಗಬೇಕು ಎಂದು ಹೇಳಿರುವ ಕಮಲ್‌ ಹಾಸನ್‌, ‘ಲಭ್ಯವಿರುವ ನೀರನ್ನು ವಿವೇಚನೆಯಿಂದ ಬಳಸಿಕೊಳ್ಳಬೇಕಾದ ಮಾರ್ಗಗಳು ಮತ್ತು ವಿಧಾನಗಳನ್ನು ನಾವು ಕಂಡುಕೊಳ್ಳಬೇಕಾಗಿದೆ. ಅಂತರ್ಜಲವನ್ನು ರಕ್ಷಿಸಲು ಸರ್ಕಾರ ವಿಫಲಗೊಂಡರೆ, ನಾವು ಅದನ್ನು ರಕ್ಷಿಸಬೇಕು’ ಎಂದು ಹೇಳಿದರು.

ಡಿಎಂಕೆ ಕಾರ್ಯಕಾರಿ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಸರಕಾರದ ವಿರುದ್ಧ ತಿರುಗಿಬಿದ್ದಿದ್ದು ಈ ತೀರ್ಪನ್ನು ಚರ್ಚಿಸಲು ಸರ್ವಪಕ್ಷ ಸಭೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ತೀರ್ಪು ಅತೀವ ದುಃಖ ತಂದಿದೆ ಎಂದಿರುವ ತಮಿಳುನಾಡು ಕಾಂಗ್ರೆಸ್‌ ಈವರೆಗಿನ ಕರ್ನಾಟಕ ಸರಕಾರಗಳು ನ್ಯಾಯಾಲಯದ ಆದೇಶಗಳನ್ನು ಪಾಲಿಸಲಿಲ್ಲ ಎಂದು ಹೇಳಿದ್ದಾರೆ.

ಜಲಾನಯನ ಪ್ರದೇಶದ ಕುರಿತು ಆತಂಕ ವ್ಯಕ್ತಪಡಿಸಿರುವ ಸಿಪಿಎಂ ರಾಜ್ಯ ಕಾರ್ಯದರ್ಶಿ ಜಿ ರಾಮಕೃಷ್ಣನ್‌ ಈ ತೀರ್ಪಿನಿಂದ ಕೃಷಿ ಮತ್ತು ರೈತರ ಕ್ಷೇಮಾಭಿವೃದ್ಧಿ ಮೇಲೆ ವ್ಯತಿರಿಕ್ತ ಪ್ರಭಾವ ಬೀರಬಹುದು’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇದೇ ವೇಳೆ ಮಾತನಾಡಿರುವ ತ.ನಾಡು ಬಿಜೆಪಿ ಅಧ್ಯಕ್ಷ ತಮಿಳಿಸೈ ಸುಂದರಾಜನ್‌, ‘ನಾವು ಈ ತೀರ್ಪನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವುದಿಲ್ಲ. ಹಲವಾರು ವರ್ಷಗಳಿಂದ ಕರ್ನಾಟಕ ನಮಗೆ ಮೋಸ ಮಾಡುತ್ತಲೇ ಬಂದಿದೆ. ಈ ಬಾರಿಯಾದರೂ ಸುಪ್ರಿಂನ ಆದೇಶದಂತೆ ನೀರು ಬಿಡುತ್ತಾರೆಯೇ ಎಂದು ಕಾದುನೋಡಬೇಕಿದೆ. ಅಲ್ಲದೇ ತ.ನಾಡು ಸರಕಾರ ರಾಜ್ಯದ ಹಕ್ಕುಗಳನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

Comments are closed.