
ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯನ್ನು ಉಸಿರುಗಟ್ಟಿಸಿ ಹತ್ಯೆಗೈದು ಬಳಿಕ ಮೃತ ದೇಹವನ್ನು ಸುಟ್ಟು ಹಾಕಿದ ಪತಿ ಹಾಗೂ ಈತನ ಸಹಾಯಕನನ್ನು ಸಂಪಂಗಿರಾಮನಗರ ಪೊಲೀಸರು ಬಂಧಿಸಿದ್ದಾರೆ. ಚಂದ್ರಕಾಂತ್ (40) ಹಾಗೂ ಈತನ ಸಹಾಯಕ ರಾಜ್ವೀರ್ ಸಿಂಗ್ (24) ಬಂಧಿತರು.
ವಿಪ್ರೋ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿದ್ದ ಅಕ್ಷತಾ (30) ಕೊಲೆಯಾದ ಮಹಿಳೆ. ಜ.6ರಂದು ಕೌಟುಂಬಿಕ ವಿಚಾರವಾಗಿ ಹತ್ಯೆಗೈದ ಚಂದ್ರಕಾಂತ್ ತನ್ನ ಸಹಾಯಕ ರಾಜ್ವೀರ್ ಸಿಂಗ್ ನೆರವಿನೊಂದಿಗೆ ಕಾರಿನಲ್ಲಿ ಮೃತ ದೇಹ ಕಳುಹಿಸಿ ತಮಿಳುನಾಡಿನ ಕಾಮನದೊಡ್ಡಿ ಅರಣ್ಯ ಪ್ರದೇಶದಲ್ಲಿ ಸುಟ್ಟು ಹಾಕಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಜಾನ್ಸನ್ ಮಾರ್ಕೆಟ್ ಬಳಿಯಿರುವ ಥ್ರೋಬ್ಯಾಂಕ್ ಎಂಬ ಪಬ್ನಲ್ಲಿ ವ್ಯವಸ್ಥಾಪಕನಾಗಿರುವ ಚಂದ್ರಕಾಂತ್ ವಿಪ್ರೋ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿದ್ದ ಅಕ್ಷತಾರನ್ನು ವಿವಾಹವಾಗಿದ್ದು, ದಂಪತಿಗೆ ನಾಲ್ಕು ವರ್ಷದ ಮಗು ಇದೆ. ಹೆಬ್ಟಾಳದ ಕೆಂಪಾಪುರ ಸಮೀಪ ಅಪಾರ್ಟ್ಮೆಂಟ್ನಲ್ಲಿ ದಂಪತಿ ವಾಸವಾಗಿದ್ದರು. ಕೌಟುಂಬಿಕ ವಿಚಾರವಾಗಿ ಮನಸ್ತಾಪವಿದ್ದು, ಪತ್ನಿ ಪರ ಪುರುಷನ ಜತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿದ್ದ ಪತಿ ಚಂದ್ರಶೇಖರ್ ನಿತ್ಯ ಜಗಳ ತೆಗೆಯುತ್ತಿದ್ದ. ಈ ಕುರಿತು ಆಕ್ಷತಾ ತನ್ನ ಕುಟುಂಬದವರ ಬಳಿ ಹೇಳಿ ಕೊಂಡಿದ್ದಳು.
ಹಲ್ಲೆ, ಉಸಿರುಗಟ್ಟಿಸಿ ಕೊಲೆ: ಜ.6ರಂದು ವೈಯಕ್ತಿಕ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಪತ್ನಿ ಅಕ್ಷತಾ ಮೇಲೆ ಹಲ್ಲೆ ನಡೆಸಿದ ಆರೋಪಿ ಬಳಿಕ ಉಸಿರುಗಟ್ಟಿಸಿ ಕೊಲೆಗೈದಿದ್ದಾನೆ. ನಂತರ ತನ್ನ ಸಹಾಯಕ ರಾಜ್ವೀರ್ ಸಿಂಗ್ನನ್ನು ಕರೆಸಿಕೊಂಡು ತನ್ನದೇ ಕಾರಿನಲ್ಲಿ ಪತ್ನಿಯ ಮೃತ ದೇಹ ಇಟ್ಟು, 25 ಸಾವಿರ ರೂ. ಹಣ ಹಾಗೂ ಅಕ್ಷತಾಳ ಮೊಬೈಲ್ ಕೊಟ್ಟು ಕಳುಹಿಸಿದ್ದಾನೆ.
ಮೃತ ದೇಹವನ್ನು ಕೊಂಡೊಯ್ದ ರಾಜ್ವೀರ್ ಸಿಂಗ್, ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕಾಮನದೊಡ್ಡಿ ಅರಣ್ಯ ಪ್ರದೇಶದಲ್ಲಿ ಅಕ್ಷತಾ ದೇಹವನ್ನು ಪೆಟ್ರೋಲ್ ಹಾಕಿ ಸುಟ್ಟು ಪಂಜಾಬ್ಗ ಪರಾರಿಯಾಗಿದ್ದಾನೆ. ಈ ಸಂಬಂಧ ಸ್ಥಳೀಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು.
ನಾಪತ್ತೆ ಪ್ರಕರಣ ದಾಖಲು: ಇತ್ತ 20 ದಿನಗಳಾದರೂ ಪುತ್ರಿ ಕಾಣದ ಹಿನ್ನೆಲೆಯಲ್ಲಿ ಅಕ್ಷತಾ ಪೋಷಕರು ಅಳಿಯನನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಆರೋಪಿ ನಿಮ್ಮ ಮಗಳು ಯಾರೊಂದಿಗೋ ಸಂಬಂಧ ಇಟ್ಟುಕೊಂಡಿದ್ದು, ಆತನೊಂದಿಗೆ ಓಡಿ ಹೋಗಿದ್ದಾಳೆ ಎಂದು ದೂರಿದ್ದ. ಇದರಿಂದ ಅನುಮಾನ ವ್ಯಕ್ತಪಡಿಸಿದ ತಾಯಿ ರೇಖಾ ಸಂಪಂಗಿರಾಮನಗರ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು.
ವಿಚಾರಣೆ ವೇಳೆ ಸುಳ್ಳು ಹೇಳಿದ್ದ ಚಂದ್ರಕಾಂತ್: ರಾಜವೀರ್ ಸಿಂಗ್ ಬಂಧನ ಬಳಿಕ ಚಂದ್ರಕಾಂತ್ನನ್ನು ವಿಚಾರಣೆಗೊಳಪಡಿಸಿದಾಗ ಶಾಂತಿನಗರದಲ್ಲಿ ಸಿಲ್ವರ್ಸ್ಪೂನ್ ಹೋಟೆಲ್ ನಡೆಸುತ್ತಿದ್ದು, ಜ.6 ರಂದು ಹೋಟೆಲ್ ಬಳಿಗೆ ಬಂದು 50 ಸಾವಿರ ಹಣ ಪಡೆದು ಹೋದ ನಂತರ ಆಕೆ ನನ್ನನ್ನು ಭೇಟಿಯಾಗಿಲ್ಲ ಎಂದು ಸುಳ್ಳು ಹೇಳಿದ್ದ. ಅಲ್ಲದೇ ಆಕೆಯ ನಡತೆ ಬಗ್ಗೆಯೂ ತಿಳಿಸಿದ್ದ. ಇದರಿಂದ ಅನುಮಾನ ವ್ಯಕ್ತಪಡಿಸಿದ ಪೊಲೀಸರು ತೀವ್ರ ರೀತಿಯಲ್ಲಿ ವಿಚಾರಣೆ ನಡೆಸಿದಾಗ ಕೊಲೆ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊಬೈಲ್ ಕೊಟ್ಟ ಸುಳಿವು: ಶವ ಸುಟ್ಟ ಬಳಿಕ ರಾಜವೀರ್ಸಿಂಗ್ ಅಕ್ಷತಾ ಬಳಸುತ್ತಿದ್ದ ಮೊಬೈಲ್ನ್ನೇ ತೆಗೆದುಕೊಂಡು ಪಂಜಾಬ್, ಉತ್ತರ ಪ್ರದೇಶ ಸೇರಿದಂತೆ ಹಲವು ಕಡೆ ಸುತ್ತಾಡಿದ್ದ. ಇದೇ ವೇಳೆ ಸಂಪಂಗಿರಾಮನಗರ ಠಾಣೆ ಪೊಲೀಸರು ಅಕ್ಷತಾ ಮೊಬೈಲ್ ಸಕ್ರಿಯವಾಗಿರುವುದನ್ನು ಗಮನಿಸಿ ಟವರ್ ಲೊಕೇಷನ್ ಹಾಕಿ ಬೆನ್ನತ್ತಿದ್ದರು. ಪಂಜಾಬ್ನಲ್ಲಿ ತಲೆಮರೆಸಿಕೊಂಡಿದ್ದ ರಾಜ್ವೀರ್ ಸಿಂಗ್ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ.
-ಉದಯವಾಣಿ
Comments are closed.