
ಬೆಂಗಳೂರು: ನಕಲಿ ಸಾಮಾಜಿಕ ಜಾಲತಾಣದ ಖಾತೆಗಳನ್ನು ತೆರೆಯುವುದು ತಪ್ಪೇನಿಲ್ಲ. ಎರಡು ಮೂರು ಖಾತೆಗಳನ್ನು ಒಬ್ಬರು ಹೊಂದಬಹುದು ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಪಾಠ ಮಾಡಿದ್ದಾರೆನ್ನಲಾದ ನಟಿ, ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ವಿರುದ್ಧ ಇದೀಗ ದೂರು ದಾಖಲಾಗಿದೆ.
ತಮ್ಮ ಪಕ್ಷದ ಕಾರ್ಯಕರ್ತರಿಗೆ ಸಾಮಾಜಿಕ ಮಾಧ್ಯಮಗಳ ನಿರ್ವಹಣೆ ಕುರಿತು ನೀಡಿರುವ ಸಲಹೆ ವಿರುದ್ಧ ಬಿಜೆಪಿ ಮುಖಂಡರು, ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಬೂತ್ ಮಟ್ಟದಿಂದ ಕಾರ್ಯಕರ್ತರಿಗೆ ಸಾಮಾಜಿಕ ಜಾಲತಾಣಗಳ ಬಳಕೆ ಕುರಿತು ಆಯೋಜಿಸಿದ್ದ ಕಾರ್ಯಾಗಾರವೊಂದರಲ್ಲಿ ನಕಲಿ ಖಾತೆ ತೆರೆಯುವಂತೆ ತಮ್ಮ ಪದಾಧಿಕಾರಿಗಳಿಗೆ ರಮ್ಯ ಕರೆ ನೀಡಿದ್ದಾರೆನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ರಮ್ಯಾ ವಿರುದ್ಧ ಬಿಜೆಪಿ ನಾಯಕರು ಕಿಡಿಕಾರಿದ್ದರು.
ರಮ್ಯಾ ವಿರುದ್ಧ ಸೈಬರ್ ಕ್ರೈಂಗೆ ದೂರು
ನರೇಂದ್ರ ಮೋದಿ ವಿಚಾರ್ ಮಂಚ್‌ನ ರಾಜ್ಯ ಕಾರ್ಯದರ್ಶಿ ಸಿ.ಟಿ.ಮಂಜುನಾಥ್ ಮಾಜಿ ಸಂಸದೆ ರಮ್ಯಾ ವಿರುದ್ಧ ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ. ಈ ಹಿಂದೆ ರಾಹುಲ್‌ಗಾಂಧಿ ಟ್ವೀಟ್ ಪರಿಶೀಲಿಸಿದಾಗ ರಷ್ಯಾ, ಅಫ್ಘಾನಿಸ್ತಾನ, ಇಂಡೋನೇಷಿಯಾದ ನಕಲಿ ಖಾತೆಗಳಿಂದ ರೀಟ್ವೀಟ್ ಬಂದಿತ್ತು. ರಮ್ಯಾ ಅವರ ಹೆಸರಿನಲ್ಲಿಯೂ 5೦ಕ್ಕೂ ಹೆಚ್ಚು ಫೇಸ್‌ಬುಕ್ ಖಾತೆಗಳಿದ್ದು, ಅದನ್ನು ಪರಿಶೀಲಿಸಬೇಕು ಮತ್ತು ರಮ್ಯಾ ಹೇಳಿಕೆ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.
Comments are closed.