ಕರಾವಳಿ

ಮಾನವೀಯತೆ ಮೆರೆದ ಕಲಬುರಗಿಯ ನ್ಯಾಯವಾದಿ :ಪ್ರಾಣ ಉಳಿಸಲು ಪ್ರಯತ್ನಿಸಿದ ಯುವಕರಿಬ್ಬರಿಗೆ ಧನ ಸಹಾಯ

Pinterest LinkedIn Tumblr

ಮಂಗಳೂರು, ಜನವರಿ.31 : ಕಾಟಿಪಳ್ಳದಲ್ಲಿ ಹತ್ಯೆಯಾದ ದೀಪಕ್ ರಾವ್ ಹಾಗೂ ಕೊಟ್ಟಾರ ಚೌಕಿ ಬಳಿ ದುಷ್ಕರ್ಮಿಗಳ ದಾಳಿಗೆ ತುತ್ತಾಗಿ ಸಾವನ್ನಪ್ಪಿದ ಬಶೀರ್ ಅವರ ಪ್ರಾಣ ಉಳಿಸಲು ಪ್ರಯತ್ನಿಸಿದ ಯುವಕರಿಬ್ಬರಿಗೆ ಕಲಬುರಗಿಯ ನ್ಯಾಯವಾದಿಯೊಬ್ಬರು ಗೌರವ ಸೂಚಿಸಿದ್ದಾರೆ.

ಕೊಲೆಗೀಡಾದ ದೀಪಕ್ ರಾವ್ ಅವರನ್ನು ರಕ್ಷಿಸಲು ಮುಂದಾಗಿದ್ದ ಅಬ್ದುಲ್ ಮಜೀದ್ ಹಾಗೂ ಅಬ್ದುಲ್ ಬಶೀರ್ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದ ಶೇಖರ್ ಕುಲಾಲ್ ಅವರಿಗೆ ತಲಾ 50,000 ರೂಪಾಯಿಗಳ ಧನಸಹಾಯ ಮಾಡಿದ್ದು, ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಚೆಕ್ ರವಾನಿಸಿದ್ದಾರೆ.

ಮಾನವೀಯತೆಯ ತತ್ವವನ್ನು ಎತ್ತಿ ಹಿಡಿದಿದ್ದಕ್ಕಾಗಿ ವಕೀಲ ವಿಲಾಸ್ ಕುಮಾರ್ ಈ ಇಬ್ಬರು ಯುವಕರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಕಳುಹಿಸಿಕೊಟ್ಟ ಚೆಕ್‌ಗಳನ್ನು ಅಬ್ದುಲ್ ಮಜೀದ್ ಹಾಗು ಶೇಖರ್ ಕುಲಾಲ್ ಅವರಿಗೆ ಜಿಲ್ಲಾಡಳಿತದ ಹಸ್ತಾಂತರ ಮಾಡಿತು.

ಮಾನವೀಯತೆ ಮೆರೆದವರಿಗೆ ದೂರದ ಕಲಬುರಗಿಯಿಂದ ಬಂದು ತಾನು ಗೌರವ ಸಲ್ಲಿಸಲು ಅಸಾಧ್ಯವಾದ ಹಿನ್ನೆಲೆಯಲ್ಲಿ ನ್ಯಾಯವಾದಿ ಪಿ. ವಿಲಾಸ್ ಕುಮಾರ್ ಎಂಬವರು ಜಿಲ್ಲಾಡಳಿತದ ಮೂಲಕ ಈ ಕಾರ್ಯ ನೆರವೇರಿಸುವಂತೆ ಎರಡು ಚೆಕ್‌ಗಳನ್ನು ಪತ್ರದೊಂದಿಗೆ ರವಾನಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಕುಮಾರ್ ಅವರು, ಈ ಚೆಕ್‌ಗಳನ್ನು ಕಳುಹಿಸಿದ್ದ ಪಿ. ವಿಲಾಸ್ ಕುಮಾರ್ ಯಾವುದೇ ರೀತಿಯ ಪ್ರಚಾರ ಬೇಡ. ಆದರೆ, ಜಿಲ್ಲಾಡಳಿತದ ಮೂಲಕ ಅರ್ಹರಿಗೆ ಈ ಗೌರವ ಸಲ್ಲಬೇಕೆಂದು ತಮ್ಮ ಪತ್ರದಲ್ಲಿ ತಿಳಿಸಿದ್ದರು. ಉತ್ತಮ ಕಾರ್ಯವೊಂದನ್ನು ಸಮಾಜಕ್ಕೆ ತಿಳಿಸುವ ಉದ್ದೇಶದಿಂದ ಪತ್ರಕರ್ತರ ಸಮ್ಮುಖದಲ್ಲಿ ಈ ಕಾರ್ಯವನ್ನು ನೆರವೇರಿಸುತ್ತಿರುವುದಾಗಿ ಹೇಳಿದರು.

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅಬ್ದುಲ್ ಮಜೀದ್, ‘ಜನವರಿ ೩ರಂದು ಮನೆಯ ಸಮೀಪ ದೀಪಕ್ ರಾವ್ ಬೊಬ್ಬಿಡುತ್ತಿದ್ದನ್ನು ಕಂಡು ಓಡಿ ಬಂದೆ. ಅಲ್ಲಿ ಬಂದು ನೋಡಿದಾಗ ಆತ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಆತನ ಪ್ರಾಣ ರಕ್ಷಿಸಬೇಕೆಂಬ ಉದ್ದೇಶದಿಂದ ಪೊಲೀಸರಿಗೆ ಕರೆ ಮಾಡಿ ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಿದೆ. ಆದರೆ, ಪ್ರಾಣ ಉಳಿಸಲಾಗಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಶೇಖರ್ ಕುಲಾಲ್ ಮಾತನಾಡಿ, ‘ಅಬ್ದುಲ್ ಬಶೀರ್ ಅವರ ಪರಿಚಯ ನನಗಿರಲಿಲ್ಲ. ಆದರೆ, ಅವರ ಪುತ್ರನ ಒಳ್ಳೆಯ ಪರಿಚಯವಿತ್ತು. ನಾನು ಖಾಸಗಿ ಆಂಬ್ಯುಲೆನ್ಸ್ ಚಾಲಕ. ಯಾವತ್ತೂ ಕೊಟ್ಟಾರ ಚೌಕಿ ರಸ್ತೆಯಲ್ಲಿ ಸಂಚರಿಸಿದವನಲ್ಲ. ಆದರೆ, ಅಂದು ನನ್ನ ಆಂಬ್ಯುಲೆನ್ಸ್‌ನಲ್ಲಿ ಇದ್ದ ಪ್ರಮೋದ್ ಎಂಬವರನ್ನು ಬಿಡಲು ಆ ದಾರಿಯಾಗಿ ಹೋಗಿದ್ದೆ’ ಎಂದು ಘಟನೆಯನ್ನು ನೆನಪಿಸಿಕೊಂಡರು.

‘ರಸ್ತೆ ಬದಿಯಲ್ಲಿ ಯುವಕನೊಬ್ಬ ಆತಂಕದಲ್ಲಿ ಯಾರಿಗೋ ಕರೆ ಮಾಡುತ್ತಿರುವುದು ಕಂಡು ವಿಚಾರಿಸಿದಾಗ, ಸರ್ವಿಸ್ ರಸ್ತೆ ಮಧ್ಯೆ ಬಶೀರ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಿದೆ’ ಎಂದು ಹೇಳಿದರು.

Comments are closed.