
ನವದೆಹಲಿ: ಸೋಮವಾರ ಬೆಳಗ್ಗೆ ಬಲೆಗೆ ಬಿದ್ದಿರುವ ಭಾರತದ ಬಿನ್ ಲಾಡೆನ್ ಎಂದೇ ಕುಖ್ಯಾತವಾಗಿರುವ ಇಂಡಿಯನ್ ಮುಜಾಹಿದ್ದೀನ್ನ ಸಹ ಸಂಸ್ಥಾಪಕ, ಉಗ್ರ ಅಬ್ದುಲ್ ಸುಭಾನ್ ಖುರೇಶಿ ಅಲಿಯಾಸ್ ತೌಕೀರ್ ಬಗ್ಗೆ ನಿಮಗೆಷ್ಟು ಗೊತ್ತು? ನಡೆಸಿದ ದುಷ್ಕೃತ್ಯಗಳೇನು?
2008 ರ ಗುಜರಾತ್ ಸರಣಿ ಸ್ಫೋಟದ ಆರೋಪಿಯಾಗಿರುವ ಖುರೇಶಿ ಒಬ್ಬ ಸಾಫ್ಟ್ವೇರ್ ಇಂಜಿನಿಯರ್. ಇಂಜಿನಿಯರ್ನಿಂದ ಬಾಂಬ್ ತಯಾರಕನಾಗಿ ಬದಲಾಗಿರುವ ಅಬ್ದುಲ್ ಸುಭಾನ್ ಖುರೇಶಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಸಿಮಿ) ಮತ್ತು ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯನ್ನು ನಡೆಸುತ್ತಿದ್ದ.
ಅಹಮದಾಬಾದ್ ಹಾಗೂ ಸೂರತ್ನಲ್ಲಿ ಜುಲೈ 26, 2008 ರಂದು 21 ಬಾಂಬ್ಗಳನ್ನು ಟಿಫಿನ್ ಕ್ಯಾರಿಯರ್ ಹಾಗೂ ಬೈಕ್ ಒಳಗಡೆ ಇಟ್ಟು ಜನಜಂಗುಳಿ ಪ್ರದೇಶದಲ್ಲಿ ಸ್ಫೋಟಿಸಿದ್ದ. ಗುಜರಾತ್ನ ನ್ಯಾಯಾಲಯವೂ ಈತನ ಬಂಧನಕ್ಕೆ ವಾರಂಟ್ ಜಾರಿ ಮಾಡಿತ್ತು.
ನಕಲಿ ದಾಖಲೆಗಳ ಮೂಲಕ ನೇಪಾಳಕ್ಕೆ ತೆರಳಿದ್ದ ಖುರೇಶಿ ಅಲ್ಲಿ ಕೆಲವು ವರ್ಷಗಳ ಕಾಲ ನೆಲೆಸಿದ್ದ. 2013-15ರ ಅವಧಿಯಲ್ಲಿ ಸೌದಿ ಅರೇಬಿಯಾಕ್ಕೂ ತೆರಳಿ ಭಾರತಕ್ಕೆ ಹಿಂದಿರುಗಿ ತನ್ನ ಭಯೋತ್ಪಾದಕ ಜಾಲವನ್ನು ಪುನರುಜ್ಜೀವನಗೊಳಿಸಿದ್ದಾನೆ.
ಖುರೇಶಿಯನ್ನು ಭಾರತೀಯ ಪೊಲೀಸರು ಹುಡುಕಾಡಿದರೂ ಪೊಲೀಸರ ಬಲೆಗೆ ಬಿದ್ದಿರಲಿಲ್ಲ. ಸಾಕಷ್ಟು ಬಾರಿ ಖುರೇಶಿ ಬಾಂಗ್ಲಾದೇಶದಲ್ಲಿ ಇದ್ದಾನೆಂದು ವರದಿಯಾಗಿದ್ದರೂ ಆತನನ್ನು ಹಿಡಿಯಲು ಸಾಧ್ಯವಾಗಿರಲಿಲ್ಲ.
ಖುರೇಶಿ ಹೆತ್ತವರು ಉತ್ತರ ಪ್ರದೇಶದಿಂದ ಕೆಲಸಕ್ಕಾಗಿ ಮುಂಬೈಗೆ ಬಂದಿದ್ದವರು. ಹಾಗಾಗಿ ಖುರೇಶಿ ವಿದ್ಯಾಭ್ಯಾಸವೆಲ್ಲಾ ಮುಂಬೈನಲ್ಲೇ ನಡೆಯಿತು. ಸಾಫ್ಟ್ವೇರ್ ಕಂಪನಿಗಳಲ್ಲೂ ಕೆಲಸ ಮಾಡಿದ್ದಾನೆ.
Comments are closed.