
ಚಿಕ್ಕೋಡಿ : ಐಟಿ ಇಲಾಖೆಯ ನೋಟಿಸ್ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ಮಾಜಿ ಶಾಸಕ ಅಭಯ್ ಪಾಟೀಲ್ ಮೇಲ್ಮನವಿಯನ್ನು ತಿರಸ್ಕರಿಸಿದ ಐಟಿ ಇಲಾಖೆ, 3.95 ಲಕ್ಷ ತೆರಿಗೆ ತುಂಬುವಂತೆ ಆದೇಶ ನೀಡಿದೆ.
ಚಿಕ್ಕೋಡಿ ತಾಲೂಕಿನ ಬೋರಗಾಂವ್ ಗ್ರಾಮದಲ್ಲಿನ ಅರಿಹಂತ ಕೋ ಆಪರೇಟಿವ್ ಬ್ಯಾಂಕಿನಲ್ಲಿರುವ 8.85 ಕೋಟಿ ಹಣಕ್ಕೆ ಸಂಬಂಧಿಸಿದಂತೆ ಐಟಿ ಇಲಾಖೆ ನೋಟಿಸ್ ನೀಡಿತ್ತು. ಈ ಹಿಂದೆ 2012ರಲ್ಲಿ ಅರಿಹಂತ ಸೊಸೈಟಿ ಮೇಲೆ ಐಟಿ ದಾಳಿ ನಡೆಸಿದಾಗ ಸಿಕ್ಕ ಡೈರಿಯಲ್ಲಿ ಅಭಯ್ ಪಾಟೀಲ್ ಎಂಬ ಹೆಸರು ಪತ್ತೆಯಾಗಿತ್ತು. ಆ ಡೈರಿಯಲ್ಲಿ ಪತ್ತೆಯಾದ ಮಾಹಿತಿ ಆಧರಿಸಿ ಐಟಿ ಅಧಿಕಾರಿಗಳು ಶಾಸಕ ಅಭಯ್ ಪಾಟೀಲ್ಗೆ ನೋಟಿಸ್ ನೀಡಿದ್ದಾರೆ.
ಬ್ಯಾಂಕ್ನಲ್ಲಿ ಅಕ್ರಮ ಹಣ ಹೊಂದಿರುವ ಆರೋಪ ತಳ್ಳಿ ಹಾಕಿದ ಮಾಜಿ ಶಾಸಕ ಅಭಯ್ ಪಾಟೀಲ್, ಅರಿಹಂತ ಬ್ಯಾಂಕಿನಲ್ಲಿ ನನ್ನ ಖಾತೆ ಇಲ್ಲ. ನನ್ನ ವಿರುದ್ಧ ಷಡ್ಯಂತ್ರ ಹೂಡಿ ಡೈರಿಯಲ್ಲಿ ನನ್ನ ಹೆಸರು ಬರುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಐಟಿ ಇಲಾಖೆಯವರು ನಿಮ್ಮ ಹೆಸರಲ್ಲಿದ್ದ 8.85 ಕೋಟಿ ಹಣಕ್ಕೆ 3.95 ಲಕ್ಷ ತೆರಿಗೆ ಕಟ್ಟುವಂತೆ ತಿಳಿಸಿದ್ದರು. ಅದು ನನ್ನದೇ ಹಣ ಆಗಿದ್ದರೆ ತೆರಿಗೆ ಕಟ್ಟಿ ಉಳಿದ 5 ಕೋಟಿ ಹಣ ಮರಳಿ ಪಡೆಯುತ್ತಿದ್ದೆ. ಅದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಐಟಿ ಇಲಾಖೆಯ ಆದೇಶ ಪ್ರಶ್ನಿಸಿ ಗೋವಾದ ಐಟಿ ಟ್ರಿಬ್ಯೂನಲ್ ಗೆ ಮೇಲ್ಮನವಿ ಸಲ್ಲಿಸಿದ್ದೇನೆ ಎಂದಿದ್ದಾರೆ ಅಭಯ್ ಪಾಟೀಲ್.
Comments are closed.