
ಮಂಗಳೂರು,ಜನವರಿ,20: ಭಾರತ ಸರಕಾರದ ಸಂಸ್ಕೃತಿ ಸಚಿವಾಲಯದ ಆಶ್ರಯದಲ್ಲಿ ನಗರದ ನೆಹರೂ ಮೈದಾನದಲ್ಲಿ ಜ.19ರಿಂದ 20ರವರೆಗೆ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಶುಕ್ರವಾರ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಕಲೆ ಸಂಸ್ಕೃತಿಗೆ ಜಾತಿ, ಮತ, ಗಡಿಗಳನ್ನು ಮೀರಿ ಎಲ್ಲರನ್ನು ಒಂದು ಗೂಡಿಸುವ ಶಕ್ತಿಯನ್ನು ಹೊಂದಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಅದ್ಭುತವಾದ ಕಲಾಪ್ರಕಾರಗಳು, ಹತ್ತಾರು ಕಲಾ ಸಂಸ್ಕೃತಿ ಒಕ್ಕೂಟಗಳಿರುವ ದೇಶ ಭಾರತ. ಕಲೆಯಲ್ಲಿ ದೇವರನ್ನು ಕಂಡ ಏಕೈಕ ದೇಶ ಭಾರತ. ಕಲಾವಿದರನ್ನು ಸಂತರೆಂದು ಪೂಜಿಸುತ್ತೇವೆ. ಜಾತಿ, ಮತ, ಪಂಥ ಎಲ್ಲವನ್ನು ಒಗ್ಗೂಡಿಸಲು ಕಲೆಯಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಬೇರೆ ಬೇರೆ ರಾಜ್ಯಗಳಿಗೆ, ಧರ್ಮಗಳಿಗೆ, ಮತಗಳಿಗೆ ವಿಭಿನ್ನವಾದ ಪ್ರಕಾರಗಳ ಸಾಂಸ್ಕೃತಿಕ ರಂಗಗಳಿವೆ. ಆರಾಧನೆಯ ಜೊತೆ ಕಲೆಯನ್ನು ಜೋಡಿಸಿಕೊಂಡ ಸಂಸ್ಕೃತಿ ಭಾರತದ ಸಂಸ್ಕೃತಿ. ಬೇರೆ ಬೇರೆ ರಾಜ್ಯಗಳ ಸಾಂಸ್ಕೃತಿಕ ಪ್ರಕಾರಗಳು, ಸಂಸ್ಕೃತಿ ಹಿಂದಿರುವ ಬದುಕು, ಸದಾಭಿರುಚಿ ಪ್ರತಿಯೊಂದು ರಾಜ್ಯಕ್ಕೂ ಸಿಗಬೇಕು ಎನ್ನುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ `ಏಕ್ ಭಾರತ್ ಶ್ರೇಷ್ಠ ಭಾರತ್’ ಪರಿಕಲ್ಪನೆ ಕಂಡು ಸಾಂಸ್ಕೃತಿಕ ಪರಂಪರೆ ಉಳಿಸಿ ಬೆಳೆಸುವ, ಕಲಾವಿದರಿಗೆ ಗೌರವ ನೀಡುವ, ಪ್ರತಿಯೊಂದು ರಾಜ್ಯದ ಕಲೆಯನ್ನು ಗುರುತಿಸುವ, ಒಂದಾಗಿಸುವ ನಿಟ್ಟಿನಲ್ಲಿ ಹಾಗೂ ಭಾರತ ಸಾಂಸ್ಕೃತಿಕ ಪರಂಪರೆಯಲ್ಲಿ ಜಗತ್ತಿನ ಮುಂದೆ ಬರಬೇಕು ಎನ್ನುವ ನಿಟ್ಟಿನಲ್ಲಿ ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವ ನಡೆಸುತ್ತಿದೆ ಎಂದು ನಳಿನ್ ಕುಮಾರ್ ತಿಳಿಸಿದರು.

ಭಾರತದ ಕಲಾವಿದರ ಸಂಗಮ -ಕಲಾವೈಭವ:-ಕಾರ್ಯಕ್ರಮದಲ್ಲಿ ದೇಶದ ವಿವಿಧ ರಾಜ್ಯಗಳ 400ಕ್ಕೂ ಅಧಿಕ ಕಲಾವಿದರು ಏಕ್ ಭಾರತ್ ಶ್ರೇಷ್ಠ ಭಾರತ್ ಕಾರ್ಯಕ್ರಮದಡಿ ಪ್ರಥಮ ದಿನದ ಕಲಾಪ್ರದರ್ಶನ ನೀಡಿದರು.
ಪಶ್ಚಿಮ ಬಂಗಾಲದ ಪುರುಲಿಯಾ ಚಾವೊ ರಾಮಾಯಣದ ಕಥೆಯನ್ನು ಒಳಗೊಂಡ ಕಲಾಪ್ರದರ್ಶನ ಕರಾವಳಿಯ ಯಕ್ಷಗಾನ ಪ್ರದರ್ಶನಕ್ಕೆ ಸಾಮ್ಯತೆ ಹೊಂದಿದ್ದ ಕಾರಣ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿತು. ಅರುಣಾಚಲ ಪ್ರದೇಶದ ಕಲಾ ಪ್ರಕಾರವಾದ ಪಕು ಇಟು, ಉತ್ತರ ಖಂಡದ ಚೋಲಿಯಾ, ಮಧ್ಯ ಪ್ರದೇಶದ ಗುಡುಮ್ ಬಾಜಾ, ಆರಂಭದಲ್ಲಿ ಹರ್ಯಾಣದ ಘೋಮರ್ ನೃತ್ಯ ಮತ್ತು ಸಂಗೀತ ಪ್ರೇಕ್ಷಕರನ್ನು ರಂಜಿಸಿತು.

ಕಾಶ್ಮೀರದ ರೋವುಪ್ ನೃತ್ಯ, ಛತ್ತೀಸ್ಗಡದ ಕ್ಯಾಕ್ಸನ್ ನೃತ್ಯ, ಗುಜರಾತ್ನ ಸಿದ್ಧಿ ದಮಾಲ್, ಪಶ್ಚಿಮ ಬಂಗಾಲದ ಪುರುಲಿಯಾ ಚಾವೊ, ಒಡಿಶಾದ ಸಂಬಾಲ್ ಪುರಿ, ಗೋವಾದ ಗೋಡೆ ಮೊದ್ನಿ, ಕರ್ನಾಟಕದ ಡೋಳ್ಳು ಕುಣಿತ ವಿಶೇಷ ಆಕರ್ಷಣೆಯಾಗಿತ್ತು.
ಕರ್ನಾಟಕ ರಾಜ್ಯದ ಬೆಂಗಳೂರು, ಹುಬ್ಬಳ್ಳಿ-ಧಾರವಾಡ ಹಾಗೂ ಪ್ರಸ್ತುತ ಮಂಗಳೂರಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ 26 ರಾಜ್ಯಗಳ 400ಕ್ಕೂ ಅಧಿಕ ಕಲಾವಿದರು ತಮ್ಮ ರಾಜ್ಯಗಳ ಸಾಂಸ್ಕೃತಿಕ ಕಲಾ ವೈಭವವನ್ನು ಪ್ರದರ್ಶಿಸಲಿದ್ದಾರೆ. ಶಾಸ್ತ್ರೀಯ ಮತ್ತು ಜನಪದ, ಸಂಗೀತ ಮತ್ತು ನೃತ್ಯ, ನಾಟಕ ಮತ್ತು ಸಾಹಿತ್ಯ ಹಾಗೂ ದೃಶ್ಯ ಕಲೆಗಳನ್ನು ಮಹೋತ್ಸವದಲ್ಲಿ ಸಾದರಪಡಿಸಲಾಗುತ್ತಿದ್ದು, ಇದರ ಜತೆಗೆ ವಿವಿಧ ರಾಜ್ಯಗಳ ಕರಕುಶಲ ವಸ್ತುಗಳ ಪ್ರದರ್ಶನವನ್ನೂ ಆಯೋಜಿಸಲಾಗಿದೆ.
ಸಮಾರಂಭದಲ್ಲಿ ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದ ಅಧಿಕಾರಿಗಳಾದ ಜೊಸೆಫ್ ಭೈರಾರಾಜ್, ಡಾ.ಸಚಿನ್ ಎ.ಎಲ್ ಮೊದಲಾದವರು ಉಪಸ್ಥಿತರಿದ್ದರು.
Comments are closed.