
ಮಂಗಳೂರು, ಜನವರಿ19: ಉಳ್ಳಾಲದ ರಾಣಿ ಅಬ್ಬಕ್ಕನ ಹೆಸರಿನಲ್ಲಿ ನಡೆಯುವ ವೀರರಾಣಿ ಅಬ್ಬಕ್ಕ ಉತ್ಸವದಲ್ಲಿ ನೀಡಲಾಗುವ ಪ್ರಶಸ್ತಿಗೆ ಸಾಹಿತಿ ಡಾ. ಸಾರಾ ಅಬೂಬಕರ್ ಹಾಗೂ ಚಲನಚಿತ್ರ ನಟಿ ವಿನಯಾ ಪ್ರಸಾದ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಮಿತಿಯ ಗೌರವಾಧ್ಯಕ್ಷ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಶುಕ್ರವಾರ ನಗರದ ಸರ್ಕ್ಯುಟ್ ಹೌಸ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಫೆ. 3 ಮತ್ತು 4ರಂದು ಸೋಮೇಶ್ವರದ ಕೊಲ್ಯದಲ್ಲಿ ಅಬ್ಬಕ್ಕ ಉತ್ಸವ ನಡೆಯಲಿದ್ದು, ಸಾಹಿತಿ, ನಾಡೋಜ ಡಾ. ಸಾರಾ ಅಬೂಬಕ್ಕರ್ ಮತ್ತು ಚಲನಚಿತ್ರ ನಟಿ ವಿನಯ ಪ್ರಸಾದ್ ಅವರಿಗೆ 4ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ವೀರರಾಣಿ ಅಬ್ಬಕ್ಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು.ವೀರರಾಣಿ ಅಬ್ಬಕ್ಕ ಪ್ರಶಸ್ತಿ ತಲಾ 30,000 ರೂ. ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ರಾಜ್ಯದ ಕನ್ನಡ ಮತ್ತ ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀ ಅವರು ಅಬ್ಬಕ್ಕ ಉತ್ಸವದಲ್ಲಿ ಭಾಗವಹಿಲಿದ್ದಾರೆ ಎಂದು ಹೇಳಿದರು.

ಈ ಉತ್ಸವಕ್ಕೆ ರಾಜ್ಯ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಒಟ್ಟು 50 ಲಕ್ಷ ಮೊತ್ತವನ್ನು ಬಿಡುಗಡೆಗೊಳಿಸಿದೆ. ಸೋಮೇಶ್ವರದಲ್ಲಿ ನಡೆಯುವ ಉತ್ಸವಕ್ಕೆ 30 ಲಕ್ಷ, ಮೈಸೂರಿನಲ್ಲಿ ಫೆಬ್ರವರಿ 10 ಮತ್ತು 11ರಂದು ನಡೆಯುವ ಅಬ್ಬಕ್ಕ ಉತ್ಸವಕ್ಕೆ 8 ಲಕ್ಷ ಹಾಗೂ ದೆಹಲಿಯಲ್ಲಿ ಮಾರ್ಚ್ ಮೊದಲ ವಾರದಲ್ಲಿ ನಡೆಯುವ ಅಬ್ಬಕ್ಕ ಉತ್ಸವಕ್ಕೆ 12 ಲಕ್ಷ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ವೀರರಾಣಿ ಅಬ್ಬಕ್ಕ ಉತ್ಸವ ಅಂಗವಾಗಿ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಸಾಂಸ್ಕೃತಿಕ ಉತ್ಸವ ಫೆ. 10 ಮತ್ತು 11 ರಂದು ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ. ಉತ್ಸವದಲ್ಲಿ ದ.ಕ. ಹಾಗೂ ಕರಾವಳಿಯ ಸಾಂಸ್ಕೃತಿಕ ಹಾಗೂ ಜನಪದ ಕಲಾ ಪ್ರದರ್ಶನಗಳು ನಡೆಯಲಿವೆ. ಬ್ಯಾರಿ, ಕೊಂಕಣಿ, ತುಳು ಸೇರಿದಂತೆ ದ.ಕ. ಜಿಲ್ಲೆಯ ವಿವಿಧ ಕಲಾ ತಂಡಗಳಿಂದ ಕಲಾ ಪ್ರದರ್ಶನ ನಡೆಯಲಿದೆ ಎಂದು ಚಿವ ಖಾದರ್ ತಿಳಿಸಿದರು.
ವೀರರಾಣಿ ಅಬ್ಬಕ್ಕ ಉತ್ಸವದ ಅಂಗವಾಗಿ ಹೊಸದಿಲ್ಲಿಯಲ್ಲಿ ಫೆಬ್ರವರಿ ಅಂತ್ಯದಲ್ಲಿ ಅಥವಾ ಮಾರ್ಚ್ ಆರಂಭದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗು ವುದು ಎಂದು ಅವರು ಹೇಳಿದರು.

ಉಳ್ಳಾಲದ ಆಸುಪಾಸಿನಲ್ಲಿ ಯಾತ್ರಿ ನಿವಾಸ್ : ಅನುದಾನ ಬಿಡುಗಡೆ
ಉಳ್ಳಾಲ ಸಯ್ಯದ್ ಮದನಿ ದರ್ಗಾ, ಸೈಂಟ್ ಸೆಬಾಸ್ಟಿನ್ ಚರ್ಚ್, ಸೋಮೇಶ್ವರ ದೇವಸ್ಥಾನ ಹಾಗೂ ಮಂಜನಾಡಿ ದರ್ಗಾದಲ್ಲಿ ಯಾತ್ರಿ ನಿವಾಸ್ ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ಅನುದಾನ ಬಿಡುಗಡೆಯಾಗಿದೆ. 50 ಲಕ್ಷ ರೂ.ನಿಂದ 75 ಲಕ್ಷ ರೂ. ವೆಚ್ಚದಲ್ಲಿ ಈ ಯಾತ್ರಿ ನಿವಾಸ್ ನಿರ್ಮಾಣವಾಗಲಿದ್ದು, ಮುಡಿಪುವಿನಲ್ಲಿ ಈಗಾಗಲೇ ಯಾತ್ರಿ ನಿವಾಸ್ ಉದ್ಘಾಟನೆಗೊಂಡಿದೆ. ಯಾತ್ರಿ ನಿವಾಸ್ ನಿರ್ಮಾಣವಾದರೆ ಹೊರ ರಾಜ್ಯ, ದೇಶಗಳಿಂದ ಬರುವ ಯಾತ್ರಿಕರಿಗೆ ಸ್ಥಳೀಯ ಪ್ರವಾಸೋದ್ಯಮ ಪ್ರದೇಶಗಳಲ್ಲಿ ವಾಸ್ತವ್ಯವಿರಲು ಅವಕಾಶ ದೊರಕಲಿದೆ ಎಂದು ಸಚಿವ ಖಾದರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ. ಸದಸ್ಯೆ ಮಮತಾ ಗಟ್ಟಿ, ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಮುಹಮ್ಮದ್ ಕರಂಬಾರ್, ತುಳು ಅಕಾಡಮಿ ರಿಜಿಸ್ಟ್ರಾರ್ ಚಂದ್ರಹಾಸ್ ರೈ, ಭಾಸ್ಕರ ರೈ ಕುಕ್ಕುವಳ್ಳಿ, ಸುಹಾಸಿನಿ ಮುಂತಾದವರು ಉಪಸ್ಥಿತರಿದ್ದರು.
Comments are closed.