ರಾಷ್ಟ್ರೀಯ

ಡೀಸಿಲ್‌ ಲೀಟರ್‌ಗೆ ದಾಖಲೆಯ 61.74 ರೂ; ಪೆಟ್ರೋಲ್‌ 71 ರೂ.

Pinterest LinkedIn Tumblr


ಹೊಸದಿಲ್ಲಿ: ಡೀಸಿಲ್‌ ದರ ದಾಖಲೆಯ ಎತ್ತರವಾಗಿ ಲೀಟರ್‌ಗೆ 61.74 ರೂ. ತಲುಪಿದೆ. ಇದೇ ವೇಳೆ ಪೆಟ್ರೋಲ್‌ ದರ ಲೀಟರ್‌ಗೆ 71 ರೂ. ತಲುಪಿದೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ದರ ನಿರಂತರವಾಗಿ ಏರುತ್ತಿರುವುದೇ ಇದಕ್ಕೆ ಕಾರಣವಾಗಿದೆ.

ಇಂದು ಸೋಮವಾರ ದಿಲ್ಲಿಯಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ 71.18 ರೂ. ಇದ್ದು ಇದು 2014ರ ಆಗಸ್ಟ್‌ ಬಳಿಕದ ಗರಿಷ್ಠ ದರವಾಗಿದೆ. ಸರಕಾರಿ ಒಡೆತನದ ತೈಲ ಕಂಪೆನಿಗಳು ಬಿಡುಗಡೆ ಮಾಡುವ ದಿನವಹಿ ಇಂಧನ ಬೆಲೆಯ ಪಟ್ಟಿಯಲ್ಲಿ ಇದು ಗೊತ್ತಾಗಿದೆ.

ದಿಲ್ಲಿಯಲ್ಲಿ ಡೀಸಿಲ್‌ ದರ ಲೀಟರ್‌ಗೆ 61.74 ರೂ. ಗಳ ಗರಿಷ್ಠ ಎತ್ತರವನ್ನು ತಲುಪಿದೆ.

ಮುಂಬಯಿಯಲ್ಲಿ ಡೀಸಿಲ್‌ ದರ ಲೀಟರಿಗೆ 65.74 ರೂ. ಇದೆ. ದಿಲ್ಲಿಗೆ ಹೋಲಿಸಿದರೆ ಮುಂಬಯಿಯಲ್ಲಿ ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್‌ ಜಾಸ್ತಿ ಇದೆ.

ಪೆಟ್ರೋಲ್‌, ಡೀಸಿಲ್‌ ದರಗಳು 2017ರ ಡಿಸೆಂಬರ್‌ನಿಂದ ಒಂದೇ ಸಮನೆ ಏರುತ್ತಿವೆ. ಅಂದು ದಿಲ್ಲಿಯಲ್ಲಿ ಡೀಸಿಲ್‌ ದರ ಲೀಟರ್‌ಗೆ 58.34 ರೂ. ಇತ್ತು. ಕಳೆದ ಒಂದು ತಿಂಗಳಲ್ಲಿ ಇದು 3.40 ರೂ. ಏರಿದೆ. ಪೆಟ್ರೋಲ್‌ ದರ 2.09 ರೂ.ಏರಿದೆ ಎಂದು ತೈಲ ಕಂಪೆನಿಗಳು ತಿಳಿಸಿವೆ.

ಬ್ರೆಂಟ್‌ ಕಚ್ಚಾ ತೈಲ ಬೆಲೆ ಬ್ಯಾರಲ್‌ಗೆ ಕಳೆದ ವಾರ 70.05 ಡಾಲರ್‌ ಇತ್ತು. ಡಬ್ಲ್ಯುಟಿಐ ದರ 64.77 ಡಾಲರ್‌ ಇತ್ತು.

-ಉದಯವಾಣಿ

Comments are closed.