ಕರಾವಳಿ

ನೈಟ್ ಲೈಟ್ ಫಿಶಿಂಗ್; ಮಲ್ಪೆ ಮೀನುಗಾರಿಕೆ ಇಲಾಖೆಯ ಕಚೇರಿಗೆ ಬೀಗ ಜಡಿದ ಮೀನುಗಾರರು!

Pinterest LinkedIn Tumblr

ಉಡುಪಿ: ಉಡುಪಿಯ ಮಲ್ಪೆ ಬಂದರಿನಲ್ಲಿರುವ ಮೀನುಗಾರಿಕೆ ಇಲಾಖೆಯ ಕಚೇರಿಗೆ ಆಳ ಸಮುದ್ರ ಮೀನುಗಾರರು ಮುತ್ತಿಗೆ ಹಾಕಿ ಗೇಟಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಆಳ ಸಮುದ್ರದಲ್ಲಿ ಕೆಲವೊಂದು ಬೋಟುಗಳು ನಿಷೇಧಿತ ನೈಟ್ ಲೈಟ್ ಫಿಶಿಂಗ್ ಹಾಗೂ ಅವೈಜ್ಞಾನಿಕ ಮೀನುಗಾರಿಕೆ ನಡೆಸುತ್ತಿರುವವರ ಬಗ್ಗೆ ಮೀನುಗಾರಿಕೆ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಆಳಸಮುದ್ರದ ಟ್ರಾಲ್ ಬೋಟು ಮೀನುಗಾರರು ಹಾಗೂ ತಾಂಡೆಲರ ಸಂಘ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ರು.

ಕಚೇರಿಯ ಗೇಟಿಗೆ ಬೀಗ ಜಡಿದ ಮೀನುಗಾರರು ಕಚೇರಿ ತೆರೆಯದಂತೆ ತಡೆದು,ಮೀನುಗಾರಿಕೆ ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿದರು. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಅವೈಜ್ಞಾನಿಕ ಮೀನುಗಾರಿಕೆ ನಿಷೇಧಿಸಿ ಅದೇಶ ಹೊರಡಿಸಿದ್ದರು ಕೂಡ, ಅನಧಿಕೃತವಾಗಿ ನೈಟ್ ಫಿಶಿಂಗ್ ಮೀನುಗಾರಿಕೆ ಕಡಳಾಲದಲ್ಲಿ ನಿಂತಿಲ್ಲ. ಪರೋಕ್ಷವಾಗಿ ಮೀನುಗಾರಿಕೆ ಇಲಾಖೆ ಅನಧಿಕೃತ ಮೀನುಗಾರಿಕೆಗೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಪೊಲೀಸ್ ಆಧಿಕಾರಿಗಳು ಹಾಗೂ ಕರಾವಳಿ ಕಾವಲು ಪೊಲೀಸ್ ಪಡೆಯ ಡಿವೈ‌ಎಸ್ಪಿ ಮೀನುಗಾರರ ಮನವೊಲಿಸಲಿ ಪ್ರಯತ್ನಸಿದರೂ ಕೂಡ , ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕರು ಹಾಗೂ ಜಿಲ್ಲಾಧಿಕಾರಿ ಸ್ಥಳಕ್ಕೆ ಅಗಮಿಸುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದರು.

ಬಂಡವಾಳಶಾಹಿಗಳ ಅವೈಜ್ಞಾನಿಕ ಮೀನುಗಾರಿಕೆಯಿಂದ ಕಡಳಾಲದಲ್ಲಿ ಮತ್ಸ್ಯಕ್ಷಾಮ ಉಂಟಾಗಿದೆ.ಇದರಿಂದ ಮೀನುಗಾರಿಕೆಯನ್ನೆ ನಂಬಿಕೊಂಡಿರುವ ಬಡ ಮೀನುಗಾರರಿಗೆ ಮೀನು ಸಿಗದೆ ನಷ್ಟದಲ್ಲಿದ್ದಾರೆ.ಕೂಡಲೇ ಮೀನುಗಾರಿಕೆ ನೈಟ್ ಲೈಟ್ ಫಿಶಿಂಗ್ ವಿರುದ್ದ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಮೀನುಗಾರರು ಎಚ್ಚರಿಸಿದ್ದಾರೆ.

Comments are closed.