ಮನೋರಂಜನೆ

ಜಗ್ಗೇಶ್‌ ನಟನೆ ನೋಡಿ ಪತ್ನಿ ಕಣ್ಣೀರು; ಹಾಲಿವುಡ್‌ ನಟನಿಗೆ ಹೋಲಿಕೆ

Pinterest LinkedIn Tumblr


ಜಗ್ಗೇಶ್‌ ಅಭಿನಯದ “8 ಎಂಎಂ’ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದೆ. ಅದರಲ್ಲೂ ಜಗ್ಗೇಶ್‌ ಅವರ ಭಾಗದ ಚಿತ್ರೀಕರಣ ಸಂಪೂರ್ಣವಾಗಿದೆ. ಹಾಗೆ ಜಗ್ಗೇಶ್‌ ಭಾಗದ ಕೆಲವು ದೃಶ್ಯಗಳನ್ನು ಅವರ ಮಡದಿ ಪರಿಮಳ ಅವರಿಗೆ ತೋರಿಸಲಾಗಿದೆ. ತಮ್ಮ ಪತಿ ಅಭಿನಯದ ಒಂದೆರೆಡು ದೃಶ್ಯಗಳನ್ನು ನೋಡಿ ಕಣ್ಣೀರು ಹಾಕಿರುವ ಪರಿಮಳ, ಅವರನ್ನು ಹಾಲಿವುಡ್‌ ನಟ ಆಲ್‌ ಪ್ಯಾಸಿನೋ ಲೆವೆಲ್‌ಗೆ ಹೋಲಿಸಿದ್ದಾರೆ.

ಹೌದು, ಈ ಕುರಿತು ಖುದ್ದು ಜಗ್ಗೇಶ್‌ ಮಾತನಾಡಿದ್ದಾರೆ. “ನಾನು ಇದುವರೆಗೂ 132 ಚಿತ್ರಗಳಲ್ಲಿ ನಟಿಸಿದ್ದೀನಿ. ಇದುವರೆಗೂ ನನ್ನ ಅಭಿನಯವನ್ನು ನನ್ನ ಹೆಂಡತಿ ಅಷ್ಟಾಗಿ ಮೆಚ್ಚಿರಲಿಲ್ಲ. “8 ಎಂಎಂ’ ಚಿತ್ರದಲ್ಲಿ ಎರಡು ಅದ್ಭುತ ದೃಶ್ಯಗಳಿವೆ. ಇದುವರೆಗೂ ಯಾವ ನಿರ್ದೇಶಕರೂ ನನಗೆ ಅಂತಹ ದೃಶ್ಯಗಳನ್ನು ಕೊಟ್ಟಿರಲಿಲ್ಲ. ಅದರಲ್ಲೂ ಒಂದು ದೃಶ್ಯ 5 ನಿಮಿಷ 23 ಸೆಕೆಂಡ್‌ ಇದ್ದರೆ, ಇನ್ನೊಂದು 4 ನಿಮಿಷ 31 ಸೆಕೆಂಡ್‌ನ‌ದ್ದು. ಯಾವುದೇ ಕಟ್‌ ಇಲ್ಲದ ದೃಶ್ಯಗಳವು. ಅದನ್ನು ನೋಡಿ ನನ್ನ ಹೆಂಡತಿಗೆ ಬಹಳ ಖುಷಿಯಾಗಿದ್ದಷ್ಟೇ ಅಲ್ಲ, ಹಾಲಿವುಡ್‌ ನಟ ಆಲ್‌ ಪಾಚಿನೋಗೆ ಹೋಲಿಸಿದಳು’ ಎನ್ನುತ್ತಾರೆ ಜಗ್ಗೇಶ್‌.

“ಈ ಚಿತ್ರದಲ್ಲಿ ನಾನೊಬ್ಬ ನೊಂದ ತಂದೆಯ ಪಾತ್ರ ಮಾಡಿದ್ದೇನೆ. ವಯಸ್ಸಾದ ಕಾಲದಲ್ಲಿ ಹಣವಿಲ್ಲದಾಗ ಏನೆಲ್ಲಾ ಪರಿಸ್ಥಿತಿಯನ್ನ ಅವನು ಎದುರಿಸುತ್ತಾನೆ ಅನ್ನೋದು ಕಥೆ. ಈ ಚಿತ್ರದಲ್ಲಿ ನಟಿಸುವಾಗ ನನ್ನಲ್ಲಿನ ಕಲಾವಿದನನ್ನು ಬಡಿದು ಎಬ್ಬಿಸಿದ್ದು ನಿರ್ದೇಶಕ ಹರಿಕೃಷ್ಣ. ಕಾಮಿಡಿಗೆ ಹೆಚ್ಚು ಸೀಮಿತವಾಗಿದ್ದ ನನ್ನನ್ನ ಬೇರೆ ತರಹ ತೋರಿಸುವುದಕ್ಕೆ ಈ ಚಿತ್ರದಲ್ಲಿ ಪ್ರಯತ್ನಿಸಿದ್ದಾರೆ’ ಎಂದು ಖುಷಿಯಾಗುತ್ತಾರೆ ಜಗ್ಗೇಶ್‌.

-ಉದಯವಾಣಿ

Comments are closed.