
ಮಂಗಳೂರು, ಜನವರಿ.2: ಘಾನಾ ದೇಶದ ಪ್ರಜೆಯೊಬ್ಬ ವೀಸಾ ಅವಧಿ ಮುಗಿದ ಬಳಿಕವೂ ನಗರದಲ್ಲಿ ಅಕ್ರಮವಾಗಿ ವಾಸ್ತವ್ಯವಿದ್ದ ಹಿನ್ನೆಲೆಯಲ್ಲಿ ಮಂಗಳೂರಿನ ನ್ಯಾಯಾಲಯವು ಕಠಿಣ ಶಿಕ್ಷೆ ವಿಧಿಸಿದ ಪ್ರಕರಣವೊಂದು ನಗರದಲ್ಲಿ ನಡೆದಿದೆ.
ಘಾನಾ ದೇಶದ ಪ್ರಜೆ ಚಿಕೋಝಿ ಫ್ರಾನ್ಸಿಸ್ ಕ್ರಿಸ್ಟೋರ್ (37) ಎಂಬಾತ ವೀಸಾ ಅವಧಿ ಮುಗಿದ ಬಳಿಕವೂ ನಗರದಲ್ಲಿ ಅಕ್ರಮವಾಗಿ ವಾಸ್ತವ್ಯವಿದ್ದ ಆರೋಪದಲ್ಲಿ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 2 ವರ್ಷಗಳ ಕಠಿಣ ಶಿಕ್ಷೆ ಹಾಗು 15,000 ರೂ. ದಂಡ ವಿಧಿಸಿದೆ.
2017ರ ಜ.16ರಂದು ಚಿಕೋಝಿ ಫ್ರಾನ್ಸಿಸ್ ಕ್ರಿಸ್ಟೋರ್ ನಗರದ ಬೆಂದೂರು ಬಳಿ ಮಾದಕ ವಸ್ತು ಕೊಕೇನ್ನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಘಟಕದ ಎಸ್ಸೈ ಶ್ಯಾಮ್ ಸುಂದರ್ ಮತ್ತು ಸಿಬ್ಬಂದಿ ಬಂಧಿಸಿದ್ದರು. ಅಲ್ಲದೆ 5.50 ಲಕ್ಷ ರೂ. ಮೌಲ್ಯದ 11.50 ಗ್ರಾಂ ತೂಕದ ಕೊಕೇನ್ ವಶಪಡಿಸಿಕೊಂಡಿದ್ದರು. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ವೀಸಾ ಅವಧಿ ಮುಗಿದಿದ್ದರೂ ವೀಸಾ ಮತ್ತು ಪಾಸ್ಪೋರ್ಟ್ ಕಾಯ್ದೆಯನ್ನು ಉಲ್ಲಂಘಿಸಿ ಅಕ್ರಮವಾಗಿ ಭಾರತದಲ್ಲಿ ವಾಸ್ತವ್ಯ ಹೂಡುತ್ತಿರುವ ವಿಷಯ ಬೆಳಕಿಗೆ ಬಂದಿತ್ತು.
ಅದರಂತೆ ಆರೋಪಿಯ ವಿರುದ್ಧ ಕದ್ರಿ ಠಾಣೆಯಲ್ಲಿ ಐ.ಪಿ.ಸಿ. ಕಲಂ 21 (ಬಿ) ಎನ್ಡಿಪಿಎಸ್ ಕಾಯ್ದೆ ಮತ್ತು ಕಲಂ 14 ವಿದೇಶಿ ಕಾಯ್ದೆ, ಕಲಂ 12(1) (ಬಿ)(ಸಿ) ಪಾರ್ಪೋರ್ಟ್ ಕಾಯ್ದೆ ಹಾಗೂ ಐಪಿಸಿ ಕಲಂ 175 ರನ್ವಯ ಪ್ರಕರಣ ದಾಖಲಿಸಲಾಗಿತ್ತು. ಕದ್ರಿ ಇನ್ಸ್ಪೆಕ್ಟರ್ ಮಾರುತಿ ಜಿ. ನಾಯಕ್ ತನಿಖೆ ನಡೆಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೆ.ಎಸ್. ಬೀಳಗಿ ಪಾಸ್ಪೋರ್ಟ್ ಕಾಯ್ದೆ ಮತ್ತು ವಿದೇಶಿ ಕಾಯ್ದೆಯಡಿಯ ಅಪರಾಧಗಳು ಸಾಬೀತಾಗಿವೆ ಎಂಬ ತೀರ್ಮಾನಕ್ಕೆ ಬಂದರಲ್ಲದೆ ಸೋಮವಾರ ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಮಾದಕ ದ್ರವ್ಯ ಕಾಯ್ದೆಯಡಿಯ ಅಪರಾಧ ಸಾಬೀತಾಗದ ಕಾರಣ ಈ ಆರೋಪದಿಂದ ಆತನನ್ನು ಖುಲಾಸೆಗೊಳಿಸಿದ್ದಾರೆ.
ಪಾಸ್ಪೋರ್ಟ್ ಕಾಯ್ದೆಯಡಿಯ ಅಪರಾಧಕ್ಕೆ 6 ತಿಂಗಳ ಕಠಿನ ಜೈಲು ಶಿಕ್ಷೆ ಮತ್ತು 5,000 ರೂ. ದಂಡ ಮತ್ತು ವಿದೇಶಿ ಕಾಯ್ದೆಯಡಿಯ ಅಪರಾಧಕ್ಕೆ 2 ವರ್ಷಗಳ ಕಠಿಣ ಶಿಕ್ಷೆ ಮತ್ತು 10,000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ ಹೆಚ್ಚುವರಿಯಾಗಿ 30 ದಿನಗಳ ಕಾರಾಗೃಹ ಶಿಕ್ಷೆಯನ್ನು ಅನುಭವಿಸ ಬೇಕೆಂದು ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಈಗಾಗಲೇ 1 ವರ್ಷವನ್ನು ಜೈಲಿನಲ್ಲಿ ಕಳೆದಿರುವ ಕಾರಣ ಇನ್ನೊಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಜೈಲು ಶಿಕ್ಷೆಯ ಅವಧಿ ಮುಕ್ತಾಯದ ಬಳಿಕ ಚಿಕೋಝಿ ಫ್ರಾನ್ಸಿಸ್ ಕ್ರಿಸ್ಟೋರ್ ನನ್ನು ಆತನ ಖರ್ಚಿನಲ್ಲಿಯೇ ಆತನ ದೇಶಕ್ಕೆ ಗಡಿಪಾರು ಮಾಡಬೇಕೆಂದು ನ್ಯಾಯಾಲಯವು ದ.ಕ. ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದೆ.
ಸರಕಾರದ ಪರವಾಗಿ ಪ್ರಧಾನ ಸರಕಾರಿ ಅಭಿಯೋಜಕ ಪುಷ್ಪರಾಜ್ ಅಡ್ಯಂತಾಯ ಕುದ್ರಿಯ ವಾದಿಸಿದ್ದರು.
Comments are closed.