ಮುಂಬೈ

ಭೀಮಾ ಕೋರೆಗಾಂವ್ ವಿಜಯೋತ್ಸವ: ಪುಣೆಯಿಂದ ಮುಂಬೈಗೂ ವ್ಯಾಪಿಸಿದ ಹಿಂಸಾಚಾರ; ಓರ್ವನ ಸಾವು-ಹಲವರಿಗೆ ಗಾಯ-40ಕ್ಕೂ ಹೆಚ್ಚು ವಾಹನಗಳು ಜಖಂ

Pinterest LinkedIn Tumblr

ಪುಣೆ: ಪ್ರತಿಭಟನೆ ವೇಳೆ ಭುಗಿಲೆದ್ದಿದ್ದ ಹಿಂಸಾಚಾರದಲ್ಲಿ ಓರ್ವ ಮೃತಪಟ್ಟಿದ್ದು, ಹಲವು ಪ್ರತಿಭಟನಾಕಾರರು ಗಾಯಗೊಂಡಿರುವ ಘಟನೆ ಮಹಾರಾಷ್ಚ್ರದ ಪುಣೆಯಲ್ಲಿ ನಡೆದಿದೆ.

ಪುಣೆಯ ಕೋರೆಗಾಂವ್ ನಲ್ಲಿ ನಿನೆ ನಡೆಯುತ್ತಿದ್ದ ಭೀಮ ಕೋರೆಗಾಂವ್ ಸಂಗ್ರಾಮದ 200ನೇ ವಿಜಯೋತ್ಸವ ಮೆರವಣಿಗೆ ವೇಳೆ ಕೆಲ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರು. ಇದರಿಂದ ಎರಡು ಗುಂಪುಗಳ ನಡುವೆ ಸಂಘರ್ಷ ಏರ್ಪಟ್ಟಿತ್ತು. ನೋಡ ನೋಡುತ್ತಿದ್ದಂತೆಯೇ ಅದು ಹಿಂಸಾಚಾರಕ್ಕೆ ತಿರುಗಿದ್ದು, 40ಕ್ಕೂ ಅಧಿಕ ವಾಹನಗಳು ಜಖಂಗೊಂಡಿವೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದು, ಓರ್ವ ಸೋಮವಾರ ಸಂಜೆ ಸಸೂನ್ ಜನರಲ್ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಸ್ಥಳೀಯ ಪೊಲೀಸ್ ವರಿಷ್ಠಾಧಿಕಾರಿ ವಿಶ್ವಾಸ್ ಪಾಟೀಲ್ ಅವರು, ‘‘ಪೊಲೀಸ್ ವ್ಯಾನ್ ಹಾಗೂ ದ್ವಿ-ಚಕ್ರ ವಾಹನ ಸೇರಿದಂತೆ ಸುಮಾರು 40 ವಾಹನಗಳಿಗೆ ಹಾನಿ ಮಾಡಲಾಗಿದೆ. ಕೋರೆಗಾಂವ್ ಸ್ಮಾರಕದತ್ತ ಸಾಗುವ ರಸ್ತೆಗಳಲ್ಲಿ ಸಂಚಾರ ನಿಷೇಧಿಸಲಾಗಿದ್ದು, ಪ್ರಸ್ತುತ ಈ ಪ್ರಾಂತ್ಯದಲ್ಲಿ ಇಂಟರ್‌ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಅಂತೆಯೇ ಪರಿಸ್ಥಿತಿ ನಿಯಂತ್ರಣಕ್ಕೆ ಬರುವ ತನಕ ಜನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಹೇಳಿದ್ದಾರೆ.

ಏತನ್ಮಧ್ಯೆ ಪುಣೆಯಿಂದ ಅಹ್ಮದ್ ನಗರ್ ಮತ್ತು ಔರಂಗಾಬಾದ್ ತೆರಳುವ ಬಸ್ ಗಳ ಮೇಲೆ ಕಲ್ಲುತೂರಾಟವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲ ಬಸ್ ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಪ್ರಕರಣ ಸಂಬಂಧ ನ್ಯಾಯಾಂಗ, ಸಿಐಡಿ ತನಿಖೆ: ಸಿಎಂ ದೇವೇಂದ್ರ ಫಡ್ನವಿಸ್
ಇನ್ನು ಪ್ರಕರಣ ಸಂಬಂಧ ಸಿಐಡಿ ತನಿಖೆ ನಡೆಸುವುದಾಗಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಹೇಳಿದ್ದು, ಅಂತೆಯೇ ಸಾವಿಗೀಡಾದ ಸಂತ್ರಸ್ಥ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಅಂತೆಯೇ ಪ್ರಕರಣ ಸಂಬಂಧ ಸಿಐಡಿ ತನಿಖೆಗೆ ಅದೇಶ ನೀಡುವುದಾಗಿ ಹೇಳಿದ್ದಾರೆ.

ಹಿಂಸಾಚಾರ ತನಿಖೆಗೆ ಕೇಂದ್ರ ಸಚಿವ ಅಠಾವಳೆ ಆಗ್ರಹ
ಇನ್ನು ಈ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ರಾಮ್‌ ದಾಸ್ ಅಠಾವಳೆ ಪ್ರತಿಕ್ರಿಯೆ ನೀಡಿದ್ದು, ದಲಿತರ ರ್ಯಾಲಿ ಮೇಲೆ ಸಂಘಪರಿವಾರ ಕಲ್ಲೆಸೆದಿರುವ ಪ್ರಕರಣದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಧ್ಯಪ್ರವೇಶಿಸಬೇಕು. ತನಿಖೆ ನಡೆಸಿ, ದಲಿತರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Comments are closed.