ಅಂತರಾಷ್ಟ್ರೀಯ

2018ರಲ್ಲಿ ಹೊರಟು 2017ರಲ್ಲಿ ಲ್ಯಾಂಡ್ ಆದ ವಿಮಾನ !

Pinterest LinkedIn Tumblr

ಆಕ್ ಲ್ಯಾಂಡ್, ಜ.1: 2018ರ ಜನವರಿ 1ರಂದು ಟೇಕ್ ಆಫ್ ಆದ ವಿಮಾನವೊಂದು ಡಿಸೆಂಬರ್ 31ರಂದು ಲ್ಯಾಂಡ್ ಆದ ವಿಚಿತ್ರ ಘಟನೆಯೊಂದು ನಡೆದಿದೆ.

ಹವಾಯನ್ ಏರ್ ಲೈನ್ಸ್ ವಿಮಾನ HA446, ಆಕ್ ಲ್ಯಾಂಡ್ ನಿಂದ ಹೊನೊಲುಲುವಿಗೆ ಹೊರಟಿತ್ತು. ಡಿಸೆಂಬರ್ 31ರ ರಾತ್ರಿ 11:55ಕ್ಕೆ ವಿಮಾನವು ಹೊರಡಬೇಕಿದ್ದು, ಅದೇ ದಿನ ಬೆಳಗ್ಗೆ 9:45ಕ್ಕೆ ಲ್ಯಾಂಡ್ ಆಗುವುದಿತ್ತು.ಆಕ್ ಲ್ಯಾಂಡ್ ಮತ್ತು ಹೊನೊಲುಲುವಿನ ನಡುವೆ 23 ಗಂಟೆಗಳ ವ್ಯತ್ಯಾಸವಿರುವುದೇ ಇದಕ್ಕೆ ಕಾರಣವಾಗಿದೆ. ಅಂದರೆ ಆಕ್ ಲ್ಯಾಂಡ್ ನಿಂದ ಡಿಸೆಂಬರ್ 31ರ ಮಧ್ಯರಾತ್ರಿ ವೇಳೆ ಹೊರಟ ವಿಮಾನವು ಹೊನೊಲುಲುವಿಗೆ ಡಿಸೆಂಬರ್ 31ರ ಬೆಳಗ್ಗೆ 9:45ಕ್ಕೆ ತಲುಪಬೇಕಾಗಿತ್ತು.

ಈ ವಿದ್ಯಮಾನವೇ ಇಷ್ಟೊಂದು ವಿಚಿತ್ರವಿರಬೇಕಾದರೆ ವಿಮಾನ ಹಾರಾಟವು 10 ನಿಮಿಷಗಳ ಕಾಲ ತಡವಾಗಿದ್ದರಿಂದ ಮತ್ತೊಂದು ಸೋಜಿಗದ ಘಟನೆ ನಡೆದಿದೆ. 2018 ಜನವರಿ 1ರಂದು ಟೇಕ್ ಆಫ್ ಆದ ವಿಮಾನವು 2017 ಡಿಸೆಂಬರ್ 31ರಂದು ಲ್ಯಾಂಡ್ ಆಗಿದೆ.

ಅಮೆರಿಕದ ಪತ್ರಕರ್ತರೊಬ್ಬರು ಇದನ್ನು ಗಮನಿಸಿದ್ದು, ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಮಾನ HA446 ಆಕ್ ಲ್ಯಾಂಡ್ ನಿಂದ ಜನವರಿ 1ರಂದು 12:05ಕ್ಕೆ ಹೊರಟಿದ್ದು, ಹೊನೊಲುಲುವಿಗೆ ಡಿಸೆಂಬರ್ 31ರಂದು ಬೆಳಗ್ಗೆ 10:16ಕ್ಕೆ ತಲುಪಿದೆ.

ಆದರೆ 2018ರಲ್ಲಿ ಹೊರಟು 2017ಕ್ಕೆ ತಲುಪಿರುವುದು ಇದೊಂದೇ ವಿಮಾನವಲ್ಲ. 2018ರಲ್ಲಿ ತೈಪೆಯಿಂದ ಹೊರಟ ಆರು ವಿಮಾನಗಳು 2017 ಡಿಸೆಂಬರ್ 31ರಂದು ಕೆನಡಾ ತಲುಪಿವೆ.

Comments are closed.