ಕರಾವಳಿ

ಕೇಂದ್ರ ಸರ್ಕಾರದ ನೂತನ ವೈದ್ಯಕೀಯ ಮಸೂದೆ ವಿರೋಧಿಸಿ ವೈದ್ಯರಿಂದ ಕ್ಯಾಂಡಲ್ ಮಾರ್ಚ್

Pinterest LinkedIn Tumblr

ಮಂಗಳೂರು, ಜನವರಿ.2: ಕೇಂದ್ರ ಸರಕಾರವು ಜಾರಿಗೊಳಿಸಲು ಉದ್ದೇಶಿಸಿರುವ ನೂತನ ವೈದ್ಯಕೀಯ ಮಸೂದೆ ಕರಾಳವಾಗಿದೆ. ಇದರಿಂದ ವೈದ್ಯರು ಈ ವೃತ್ತಿಯಲ್ಲಿ ಮುಂದುವರಿಯಲು ಕಷ್ಟವಾಗಬಹುದು.ಮಸೂದೆಯು ಅನೇಕ ತಪ್ಪು ಅಂಶಗಳಿಂದ ಕೂಡಿದೆ ಎಂದು ಐಎಂಎ ಮಂಗಳೂರು ಘಟಕದ ಅಧ್ಯಕ್ಷ ಡಾ. ಕೆ.ಆರ್.ಕಾಮತ್ ಹೇಳಿದರು.

ಕೇಂದ್ರ ಸರಕಾರವು ಜಾರಿಗೊಳಿಸಲು ಉದ್ದೇಶಿಸಿರುವ ನೂತನ ವೈದ್ಯಕೀಯ ಮಸೂದೆಯನ್ನು ವಿರೋಧಿಸಿ ಇಂಡಿಯನ್ ಮೆಡಿಕಲ್ ಎಸೋಸಿಯೇಶನ್ ನ ಮಂಗಳೂರು ಘಟಕದ ನೇತೃತ್ವದಲ್ಲಿ ಸೋಮವಾರ ಮುಸ್ಸಂಜೆ ಐಎಂಎ ಕಚೇರಿ ಮುಂದೆ ನಡೆದ ವೈದ್ಯರ ಕ್ಯಾಂಡಲ್ ಮಾರ್ಚ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ನೂತನ ವೈದ್ಯಕೀಯ ಮಸೂದೆಯ ತಿದ್ದುಪಡಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಆ ಹಿನ್ನೆಲೆಯಲ್ಲಿ ಕ್ಯಾಂಡಲ್ ಮಾರ್ಚ್ ಮೂಲಕ ಸಾಂಕೇತಿಕ ಪ್ರತಿಭಟನೆ ನಡೆಸಿ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದವರು ಹೇಳಿದರು.

ಈ ಮಸೂದೆಯು ಸಂಸತ್ತಿನಲ್ಲೇ ಮಸೂದೆಗೆ ಸಂಬಂಧಿಸಿ ವಿಧೇಯಕ ಮಂಡಿಸಲಾಗಿದೆ. ಅದರಂತೆ ಶೇ.40ರಷ್ಟು ವೈದ್ಯಕೀಯ ಶಿಕ್ಷಣದ ಪ್ರವೇಶಾತಿ ಶುಲ್ಕವನ್ನು ಸರಕಾರ ನಿರ್ಧರಿಸಿದರೆ ಉಳಿದವುಗಳನ್ನು ಖಾಸಗಿ ವೈದ್ಯಕೀಯ ಸಂಸ್ಥೆಗಳು ನಿರ್ಧರಿಸಲಿದೆ. ಈ ಮಸೂದೆ ಅಂಗೀಕಾರಗೊಂಡು ಕಾನೂನು ರೂಪತಾಳಿದರೆ ಭವಿಷ್ಯದ ದಿನಗಳಲ್ಲಿ ಆರ್ಥಿಕವಾಗಿ ತೀರಾ ಹಿಂದುಳಿದ ಹಾಗೂ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗಬಹುದು ಎಂದು ಪ್ರತಿಭಟನಾ ನಿರತ ವೈದ್ಯರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಐಎಂಎ ಮಂಗಳೂರು ಘಟಕದ ಪದಾಧಿಕಾರಿಗಳಾದ ಡಾ. ಉಲ್ಲಾಸ್ ಶೆಟ್ಟಿ, ಡಾ. ಹಬೀಬುರ್ರಹ್ಮಾನ್, ಡಾ. ಸಚ್ಚಿದಾನಂದ ರೈ, ಡಾ. ಎಂ.ಎ. ಕುಡ್ವ, ಡಾ. ಆನಂದ ಬಂಗೇರಾ, ಡಾ. ಸುಚಿತಾ ಶೆಣೈ, ಡಾ. ಅಣ್ಣಯ್ಯ ಕುಲಾಲ್ ಮತ್ತಿತರರು ಪಾಲ್ಗೊಂಡಿದ್ದರು.

Comments are closed.