
ಸಿಯೋಲ್: ಯುದ್ಧೋದಾಹದಲ್ಲಿರುವ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮತ್ತೆ ತಮ್ಮ ಉದ್ಧಟತನವನ್ನು ಪ್ರದರ್ಶಿಸಿದ್ದು, ಹೊಸವರ್ಷದ ಮೊದಲ ದಿನವೇ ಅಮೆರಿಕಾ ದೇಶಕ್ಕೆ ಎಚ್ಚರಿಕೆ ನೀಡಿದ್ದಾರೆ.
ಹೊಸ ವರ್ಷದ ಮೊದಲ ಭಾಷಣದಲ್ಲಿಯೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಎಚ್ಚರಿಕೆ ನೀಡಿರುವ ಕಿಮ್ ಜಾಂಗ್ ಉನ್, ಅಣ್ವಸ್ತ್ರದ ಬಟನ್ ಸದಾ ನನ್ನ ಮೇಜಿನ ಮೇಲೆಯೇ ಇರುತ್ತದೆ ಹುಷಾರಾಗಿರಿ ಎಂದು ಎಚ್ಚರಿಸಿದ್ದಾರೆ.
ಉತ್ತರ ಕೊರಿಯಾ ಬಳಿ ಅಣ್ವಸ್ತ್ರ ದಾಸ್ತಾನು ಇದೆ. ಅಮೆರಿಕಾದ ಬಹುಪಾಲು ಭಾಗವನ್ನು ತಲುಪುವ ಶಕ್ತಿ ನಮ್ಮ ಅಣ್ವಸ್ತ್ರಗಳಿಗಿದ್ದು, ಅಣ್ವಸ್ತ್ರದ ಬಟನ್ ಸದಾ ನನ್ನ ಮೇಜಿನ ಮೇಲೆಯೇ ಇರುತ್ತದೆ. ಇದು ಕೇವಲ ಬೆದರಿಯಲ್ಲ ವಾಸ್ತವ ಎಂದು ಹೇಳಿದ್ದಾರೆ.
ಉತ್ತರ ಕೊರಿಯಾ ಜವಾಬ್ದಾರಿಯುತ ಹಾಗೂ ಶಾಂತಿ ಪ್ರಿಯ ದೇಶವಾಗಿದ್ದು, ಎಲ್ಲಿಯವರೆಗೆ ನಮ್ಮ ವಿರುದ್ಧ ಆಕ್ರಮಣಕಾರಿ ಮನೋಭಾವವಿರುವುದಿಲ್ಲವೋ ಅಲ್ಲಿಯವರೆಗೂ ನಾವೂ ಕೂಡ ಅಣ್ವಸ್ತ್ರಗಳನ್ನು ಬಳಕೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಅಮೆರಿಕ ಹಾಗೂ ಉತ್ತರ ಕೊರಿಯಾ ನಡುವಿನ ಮಧ್ಯೆ ಇತ್ತೀಚಿನ ದಿನಗಳಲ್ಲಿ ಹಗ್ಗಜಗ್ಗಾಟ ಹೆಚ್ಚುತ್ತಲೇ ಇದ್ದು, ಇತ್ತೀಚೆಗಷ್ಟೇ ಉಭಯ ರಾಷ್ಟ್ರಗಳ ನಡುವೆ ವಾಕ್ಸಮರಗಳೂ ಕೂಡ ನಡೆದಿತ್ತು. ಅಮೆರಿಕಾ ದೇಶಕ್ಕೆ ಸೆಡ್ಡು ಹೊಡೆಯಲು ಮುಂದಾಗಿದ್ದ ಉತ್ತರ ಕೊರಿಯಾ ಸೆಪ್ಟೆಂಬರ್ ತಿಂಗಳಿನಲ್ಲಿ ವಿಶ್ವಸಂಸ್ಥೆಯ ನಿಯಮಗಳನ್ನು ಉಲ್ಲಂಘನೆ ಮಾಡಿ ಹಲವು ಬಾರಿ ಅಣ್ವಸ್ತ್ರ ಪರೀಕ್ಷೆಗಳನ್ನೂ ಕೂಡ ಮಾಡಿತ್ತು. ಉತ್ತರ ಕೊರಿಯಾದ ಈ ನಡೆ ಇಡೀ ವಿಶ್ವದ ಕಣ್ಣು ಕೆಂಪಗಾಗುವಂತೆ ಮಾಡಿತ್ತು. ಈ ಎಲ್ಲಾ ಬೆಳವಣಿಗೆಗಳ ನಡುವೆ ಅಮೆರಿಕ ತ್ತರ ಕೊರಿಯಾ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂಬ ಮಾತುಗಳು ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಕೇಳಿ ಬರತೊಡಗಿವೆ.
Comments are closed.