
ಬೆಂಗಳೂರು: ನಗರ ಹೊಸ ವರ್ಷ 2018ನ್ನು ಸಂಭ್ರಮ-ಸಡಗರದಿಂದ ಸ್ವಾಗತಿಸಿದೆ. ಹೊಸ ವರ್ಷಕ್ಕೆ ಮೋಜು ಮಾಡುವವರು ನಗರದ ಪ್ರಮುಖ ವಾಣಿಜ್ಯ ಚಟುವಟಿಕೆ ತಾಣವಾದ ಎಂ.ಜಿ.ರೋಡ್, ಬ್ರಿಗೇಡ್ ರಸ್ತೆಗಳಲ್ಲಿ ಮಧ್ಯರಾತ್ರಿ ಪಾರ್ಟಿಯಲ್ಲಿ ತೊಡಗಿದ್ದರೆ ಇನ್ನೂ ಹಲವರು ಹೊಸ ವರ್ಷವನ್ನು ರಜಾದಿನವೆಂದು ಪ್ರವಾಸಗಳಲ್ಲಿ, ರೆಸಾರ್ಟ್ ಗಳಲ್ಲಿ ಕಳೆಯುತ್ತಿದ್ದಾರೆ.
ಈ ಎರಡೂ ರಸ್ತೆಗಳಲ್ಲಿ ಅತ್ತಿಂದಿತ್ತ; ಇತ್ತಿಂದತ್ತ ಸರಸರನೆ ಹುಳುಗಳೋಪಾದಿಯಲ್ಲಿ ಹರಿದಾಡುತ್ತಿದ್ದ ಸಾವಿರಾರು ಮಂದಿಯ ನಡುವೆ ಒಂದು ಸುತ್ತು ಹಾಕಿದರೆ ಯಾವ ಜಾತ್ರೆಗೇನೂ ಕಡಿಮೆ ಇರಲಿಲ್ಲ.
ಜಾತ್ರೆಯ ಅನುಭವ ನೀಡುವಂತಿದ್ದ ಆ ಕ್ಷಣಗಳಿಗೆ ಬ್ರಿಗೇಡ್ ರಸ್ತೆಯುದ್ದಕ್ಕೂ ಸಿಂಗರಿಸಲಾಗಿದ್ದ ವಿದ್ಯುತ್ ದೀಪಾಲಂಕಾರ ಮತ್ತಷ್ಟು ಮೆರುಗು ನೀಡಿತ್ತು.
ಬ್ರಿಗೇಡ್ ಮತ್ತು ಎಂಜಿ ರಸ್ತೆ ಕೂಡುವ ವಿಶಾಲ ಸ್ಥಳದಲ್ಲಿ ಗುಂಪು ಸೇರಿದ್ದ ಜನ ಸಮೂಹ ಸರಿರಾತ್ರಿ 12ಕ್ಕೆ ‘ಹ್ಯಾಪಿ ನ್ಯೂ ಇಯರ್’… ಎಂದು ಎಷ್ಟು ಸಾಧ್ಯವೋ ಅಷ್ಟೂ ಜೋರಾಗಿ ಹರಚಿ, ಕೂಗಿದರು. ಕುಣಿದು ಕುಪ್ಪಳಿಸಿದರು. ಪರಸ್ಪರ ಶುಭಾಯಶ ವಿನಿಮಯ ಮಾಡಿಕೊಂಡರು.
ಪಬ್, ಬಾರ್ಗಳಲ್ಲಿ ಸಂಗೀತದ ಅಬ್ಬರಕ್ಕೆ ಯುವ ಸಮೂಹ ಹೆಜ್ಜೆ ಹಾಕಿ ನೃತ್ಯ ಮಾಡಿ, ಸಂಭ್ರಮದಿಂದ ಹೊಸ ವರ್ಷವನ್ನು ಬರ ಮಾಡಿಕೊಂಡರು.
ಸಂಭ್ರಮದಲ್ಲಿ ಜನ ಸಮೂಹ.
ಹೆಚ್ಚಿನ ಭದ್ರತೆ
ಪೊಲೀಸ್ ಇಲಾಖೆ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಭದ್ರತೆ ಒದಗಿಸಿತ್ತು.
ಎತ್ತ ನೋಡಿದಡತ್ತ ಪೊಲೀಸರೇ ಕಾಣಸಿಕ್ಕರು. ಕೈಯಲ್ಲಿ ಲಾಠಿ ಹಿಡಿದು, ಟಕ್.. ಟಕ್… ಬೂಟಿನ ಸದ್ದಿನೊಂದಿಗೆ ಹದ್ದಿನ ಕಣ್ಣಿರಿಸಿ ಸುತ್ತುತ್ತಿದ್ದ ಪೊಲೀಸರನ್ನು ಕಂಡರೆ ಸಾಕು ನೆರೆದಿದ್ದ ಜನರಲ್ಲಿ ಏನೋ ಒಂದು ವಿಶ್ವಾಸ ಮೂಡಿಸಿದಂತಿತ್ತಿತ್ತು.
ಮೆಟ್ರೋ ಸೇವೆ ಮಧ್ಯರಾತ್ರಿ ವರೆಗೂ ಇದ್ದುದರಿಂದ ನಗರದ ನಾಲ್ಕೂ ದಿಕ್ಕಿನಿಂದ ಜನರು ಹರಿದು ಬರುತ್ತಲೇ ಇದ್ದರು. ಸಂಭ್ರಮಾಚರಣೆ ಬಳಿಕ ನಿಧಾನವಾಗಿ ಜನ ಚದುರಿತು.
Comments are closed.