
ಮಂಗಳೂರು, ಡಿಸೆಂಬರ್. 30: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಂಭಗೊಂಡ ಕರಾವಳಿ ಉತ್ಸವದ ಪ್ರಯುಕ್ತ ಕರಾವಳಿ ಕಡಲ ತೀರ ಪಣಂಬೂರ್ ಬೀಚ್ ನಲ್ಲಿ ಹಮ್ಮಿಕೊಳ್ಳಲಾದ ಬೀಚ್ ಉತ್ಸವಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಪಣಂಬೂರು ಬೀಚ್‌ನಲ್ಲಿ ನಿರ್ಮಿಸಲಾದ ಬೃಹತ್ ವೇದಿಕೆಯಲ್ಲಿ ಮೂಡಾ ಅಯುಕ್ತ ಹಾಗೂ ಬೀಚ್ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಶ್ರೀಕಾಂತ್ ರಾವ್ ಅವರು ಚೆಂಡೆ ಭಾರಿಸುವ ಮೂಲಕ ಬೀಚ್ ಉತ್ಸವದ ಉದ್ಘಾಟನೆ ನೆರವೇರಿಸಿದರು.

ಬೀಚ್ ಉತ್ಸವ ಸಮಿತಿಯ ಅಧ್ಯಕ್ಷ ಯತೀಶ್ ಬೈಕಂಪಾಡಿ, ಸದಸ್ಯರಾದ ಪಣಂಬೂರು ಇನ್‌ಸ್ಪೆಕ್ಟರ್ ರಫೀಕ್, ಆಹಾರ ಇಲಾಖೆ ಉಪನಿರ್ದೇಶಕ ಜಯಪ್ಪ ಹಾಗೂ ಮತ್ತಿತ್ತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬೀಚ್ ಉತ್ಸವ ಪ್ರಯುಕ್ತ ಸಮುದ್ರ ತೀರದಲ್ಲಿ ಸಂಜೆ ಆಹಾರ ಉತ್ಸವದ ಉದ್ಘಾಟನೆ ನಡೆಯಿತು. ವೇದಿಕೆಯಲ್ಲಿ ಸಂಜೆ ಡ್ಯಾನ್ಸ್ ಫೆಸ್ಟಿವಲ್ಸ್ ಮತ್ತು ತುಳು ಹಾಡು ಸ್ಪರ್ಧೆ ನಡೆಯಿತು.

ದ.ಕ.ಜಿಲ್ಲಾ ಕರಾವಳಿ ಉತ್ಸವದ ಪ್ರಯುಕ್ತ ಪಣಂಬೂರ್ ಬೀಚ್‌ನಲ್ಲಿ ಶುಕ್ರವಾರದಿಂದ ಆರಂಭಗೊಂಡಿರುವ ಬೀಚ್ ಉತ್ಸವ – ಡಿ.31 ರವರೆಗೆ ನಡೆಯಲಿದೆ.
ಡಿ.30ರಂದು ಬೆಳಗ್ಗೆ 9ಕ್ಕೆ ಬೀಚ್ ವಾಲಿಬಾಲ್ ಮತ್ತು ತ್ರೋ ಬಾಲ್ ಪಂದ್ಯಾಟ, ಸಂಜೆ 4ರಿಂದ ಸಮರ್ಥ್ ಶೆಣೈ ಮತ್ತು ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ, ಸಂಜೆ 5ರಿಂದ ಗಾಯನ ಸ್ಪರ್ಧೆ ನಡೆಯಲಿದೆ.

ಮಧ್ಯರಾತ್ರಿ 12ಕ್ಕೆ ಹೊಸ ವರ್ಷಾಚರಣೆ :
ಡಿ.31ರಂದು ಬೆಳಗ್ಗೆ 5 ಗಂಟೆಗೆ ಬೃಹತ್ ಯೋಗ ಕಾರ್ಯಕ್ರಮ, ಬೆಳಗ್ಗೆ 6:30ರಿಂದ ಸ್ವಾತಿ ರಾವ್ ಮತ್ತು ಬಳಗದಿಂದ ರಾಗ- ಉದಯ ರಾಗ ಕಾರ್ಯಕ್ರಮ, 9:30ರಿಂದ ಸ್ಟ್ಯಾಂಡ್ ಅಪ್ ಪೆಡಲಿಂಗ್, 10ಕ್ಕೆ ಸರ್ಫಿಂಗ್, 10ಕ್ಕೆ ಮರಳು ಶಿಲ್ಪ ಸ್ಪರ್ಧೆ, ಸಂಜೆ 4ಕ್ಕೆ ಸಂಗೀತ, ಸಂಜೆ 5ರಿಂದ ಪಟ್ಲ ಸತೀಶ್ ಶೆಟ್ಟಿ ನೇತೃತ್ವದಲ್ಲಿ ಯಕ್ಷಗಾನ ಮೂರ್ತ, ಸಂಜೆ 5:30ರಿಂದ ಕರಾವಳಿ ಉತ್ಸವ ಸಮಾರೋಪ, ಪ್ರಶಸ್ತಿ ವಿತರಣೆ, ಸಂಜೆ 6:30ರಿಂದ ಅಶ್ವಿನ್ ಶರ್ಮ ಮತ್ತು ತಂಡದಿಂದ ಸಂಗೀತ ರಸಸಂಜೆ ಕಾರ್ಯಕ್ರಮ, ರಾತ್ರಿ 9ರಿಂದ ವಸುದೀಕ್ಷಿತ ಮತ್ತು ತಂಡದಿಂದ ಸ್ವರಾತ್ಮ ಹಾಗೂ ಮಧ್ಯರಾತ್ರಿ 12ಕ್ಕೆ ಹೊಸ ವರ್ಷಾಚರಣೆ ನಡೆಯಲಿದೆ.
ಹರಿದು ಬರುತ್ತಿರುವ ಜನಸಾಗಾರ : ಕಡಲು ವೀಕ್ಷಣೆಗೆ ಬರುವವರಿಗೂ ಬೀಚ್ ಉತ್ಸವದ ಸವಿ :
ಶಾಲಾ ಕಾಲೇಜುಗಳಿಗೆ ಕ್ರಿಸ್ಮ್ಸ್ ಹಬ್ಬದ ರಜೆ ಇರುವ ಕಾರಣ ಮತ್ತು ಕಡಲನ್ನು ವೀಕ್ಷಣೆ ಮಾಡಲು ವಿದ್ಯಾರ್ಥಿಗಳು ಹೊರ ಜಿಲ್ಲೆ ರಾಜ್ಯಗಳ ಜನರು ತಂಡ ತಂಡವಾಗಿ ಆಗಮಿಸುತ್ತಿದ್ದು, ಬೀಚ್ ಉತ್ಸವಕ್ಕೆ ಮತ್ತಷ್ಟು ಮೆರುಗು ನೀಡುತ್ತಿದೆ. ಕಡಲ ತೀರದಲ್ಲಿ ನೀರಿನ ಅಲೆಯೊಂದಿಗೆ ಆಟವಾಡುವವರು, ಕಡಲನ್ನು ನೋಡಲು ಬರುವವರು ಬೀಚ್ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಕರಾವಳೀ ಉತ್ಸವ ಮೈದಾನದಲ್ಲಿ ನಡೆಯುತ್ತಿರುವ ಬೃಹತ್ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಭೇಟಿ ನೀಡುತ್ತಿರುವ ಜನರ ಸಂಖ್ಯೆ ಹೆಚ್ಚುತ್ತಿದೆ. ಸರಕಾರಿ ರಜಾ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕರಾವಳಿ ಉತ್ಸವ ಮೈದಾನ,ಕದ್ರಿ ಪಾರ್ಕ್ಗೆ ಭೇಟಿ ನೀಡುತ್ತಾರೆ.
ಎಲ್ಲಕ್ಕಿಂತಲೂ ಹೆಚ್ಚಾಗಿ ಣಂಬೂರು ಬೀಚ್‌ನ ಕಡಲಿನ ಆಕರ್ಷಣೆಯಿಂದ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಈ ಪ್ರವಾಸಿಗರಿಗೆ ಅಲ್ಲಿ ಕಡಲಿನ ವೀಕ್ಷಣೆಯೊಂದಿಗೆ ಬೀಚ್ ಉತ್ಸವ ಮತ್ತಷ್ಟು ಖುಷಿ ನೀಡಿದೆ. ಇದೇ ವೇಳೆ ಪಣಂಬೂರು ಬೀಚ್ ಪರಿಸರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ದಟ್ಟಣೆ ಹೆಚ್ಚುತ್ತಿದೆ.
Comments are closed.