ಕರ್ನಾಟಕ

ವಿಜಯಪುರ: ದುಷ್ಕೃತ್ಯಕ್ಕೆ ಮಹಿಳೆಯ ಸಹಕಾರ? ತಪ್ಪೊಪ್ಪಿಗೆ ಹೇಳಿಕೆ ನೀಡಿದ ಪ್ರಮುಖ ಆರೋಪಿ

Pinterest LinkedIn Tumblr

ವಿಜಯಪುರ: ವಿಜಯಪುರದ ದಲಿತ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಪ್ರಮುಖ ಆರೋಪಿಯ ಸಂಬಂಧಿ ಮಹಿಳೆಯೊಬ್ಬರು ಸಹಕರಿಸಿದ್ದರು ಎಂಬುದು ಸಿಐಡಿ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

‘ಎರಡ್ಮೂರು ಹೆಸರುಗಳಿಂದ ಗುರುತಿಸಿಕೊಂಡಿರುವ ಈ ಮಹಿಳೆ, ದುಷ್ಕೃತ್ಯಕ್ಕಾಗಿ ಆರೋಪಿಗಳಿಗೆ ತನ್ನ ಮನೆಯಲ್ಲಿ ಅವಕಾಶ ಮಾಡಿಕೊಟ್ಟಿದ್ದು ರುಜುವಾತು ಆಗಿದೆ. ಶೀಘ್ರದಲ್ಲೇ ಆಕೆಯನ್ನು ಬಂಧಿಸಲಾಗುವುದು’ ಎಂದು ಸಿಐಡಿ ತನಿಖಾ ತಂಡದ ಅಧಿಕಾರಿಯೊಬ್ಬರು ತಿಳಿಸಿದರು.

‘ಬಾಲಕಿಯು ಅತ್ಯಾಚಾರದಿಂದಲೇ ಮೃತಪಟ್ಟಿದ್ದಾಗಿ ಸಿಐಡಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮರಣೋತ್ತರ ಪರೀಕ್ಷಾ ವರದಿ ಕೂಡ, ಬಾಲಕಿಯು ಅತ್ಯಾಚಾರದಿಂದ ಮೃತಪಟ್ಟಿರುವ ಅಂಶವನ್ನೇ ಬಿಂಬಿಸಿದೆ. ಹಿಸ್ಟೊಪೆಥಾಲಾಜಿಕಲ್‌ ವರದಿ ನಮ್ಮ ಕೈ ಸೇರಿಲ್ಲ. ಬಾಲಕಿಯ ದೇಹದಿಂದ ಹೊರತೆಗೆದಿರುವ ಅಂಗಾಂಶಗಳ ಮಾದರಿಯನ್ನು ವೈದ್ಯರು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ವರದಿ ಬಂದ ಬಳಿಕವಷ್ಟೇ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆಯೋ ಇಲ್ಲವೋ ಎಂಬುದನ್ನು ನಿಖರವಾಗಿ ಹೇಳಬಹುದು’ ಎಂದು ಅವರು ಹೇಳಿದರು.

‘ತಂದೆ– ತಾಯಿ, ಶಾಲಾ ಸಿಬ್ಬಂದಿ, ವಿದ್ಯಾರ್ಥಿನಿ ಜತೆಯಲ್ಲಿದ್ದ ಬಾಲಕಿಯ ಹೇಳಿಕೆಗಳನ್ನು ಪಡೆದಿದ್ದೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿ ಸಂಗ್ರಹಿಸಿದ್ದೇವೆ. ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೊಳಪಡಿಸಲು ಅಗತ್ಯವಿರುವ ಎಲ್ಲ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಪರಾಮರ್ಶೆಯೂ ನಡೆದಿದೆ’ ಎಂದು ಮಾಹಿತಿ ನೀಡಿದರು.

‘ಆರೋಪಿ ಕೂಡ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ಅದನ್ನು ದಾಖಲು ಮಾಡಿಕೊಳ್ಳಲಾಗಿದೆ’ ಎಂದು ಸಿಐಡಿ ಪೊಲೀಸರು ತಿಳಿಸಿದ್ದಾರೆ.

ಇಂಡಿಯಲ್ಲಿ ಬಂಧನ:

ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಐಡಿ ತಂಡ ಈಗಾಗಲೇ ನಾಲ್ವರನ್ನು ಬಂಧಿಸಿದೆ. ಹದಿನೇಳುವರೆ ವರ್ಷದ ಪ್ರಮುಖ ಆರೋಪಿ ಹಾಗೂ ಆತ ಮುಂಬೈನಲ್ಲಿ ತಲೆಮರೆಸಿಕೊಳ್ಳಲು ನೆರವು ನೀಡಿದ ಮತ್ತೊಬ್ಬನನ್ನು ಪೊಲೀಸ್ ಕಸ್ಟಡಿಗೆ ಪಡೆದು, ವಿಚಾರಣೆಗೊಳಪಡಿಸಲಾಗಿದೆ. ಇನ್ನಿಬ್ಬರು ನ್ಯಾಯಾಂಗ ಬಂಧನದಲ್ಲಿದ್ದಾರೆ.

‘ಪ್ರಮುಖ ಆರೋಪಿ ಹದಿನೇಳೂವರೆ ವರ್ಷದವನಾಗಿದ್ದು, ಘಟನೆ ನಂತರ ಸ್ನೇಹಿತರ ನೆರವಿನಿಂದ ಮುಂಬೈಗೆ ಪರಾರಿಯಾಗಿದ್ದ. ಆತನ ಮೊಬೈಲ್‌ ಸಿಡಿಆರ್‌ (ಕಾಲ್‌ ಡಿಟೇಲ್‌ ರೆಕಾರ್ಡ್) ಬೆನ್ನಟ್ಟಿದ ವಿಶೇಷ ಪೊಲೀಸ್‌ ತಂಡ ಬಂಧನಕ್ಕೆ ಕಾರ್ಯಾಚರಣೆ ನಡೆಸಿತ್ತು. ಮುಂಬೈನಲ್ಲಿ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದ ಈತನನ್ನು, ಖಚಿತ ಮಾಹಿತಿ ಮೇರೆಗೆ ಇಂಡಿ ರೈಲ್ವೆ ನಿಲ್ದಾಣದಲ್ಲಿ ಬಂಧಿಸಲಾಯಿತು’ ಎಂದು ಜಿಲ್ಲಾ ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಮೂವರು ಡಿವೈಎಸ್ಪಿ, ಇಬ್ಬರು ಪೊಲೀಸ್ ಇನ್‌ಸ್ಪೆಕ್ಟರ್‌ ಹಾಗೂ ಹತ್ತು ಮಂದಿ ಸಿಬ್ಬಂದಿಯನ್ನೊಳಗೊಂಡ ತಂಡ ವಿಜಯಪುರದಲ್ಲೇ ಬೀಡು ಬಿಟ್ಟಿದೆ. ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೂ ಇಲ್ಲಿಯೇ ಕಾರ್ಯಾಚರಣೆ ನಡೆಸಲಿದೆ. ಮೂವರು ಆರೋಪಿಗಳು ನಾಪತ್ತೆಯಾಗಿದ್ದು, ಜಿಲ್ಲಾ ಪೊಲೀಸರ ಸಹಕಾರದಿಂದ ಶೋಧ ನಡೆದಿದೆ’ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದರು.

Comments are closed.