ಕರ್ನಾಟಕ

ಈ ವಿಚಾರ ಮಾತನಾಡಲು ಯಡಿಯೂರಪ್ಪ ಯಾರು?

Pinterest LinkedIn Tumblr


ವಿಜಯಪುರ: ರಾಜ್ಯದಲ್ಲಿ ಚುನಾವಣೆ ರಾಜಕೀಯ ಮಾಡಲು ಬಿಜೆಪಿ ನಾಯಕರು ಮಹದಾಯಿ ಸಮಸ್ಯೆ ಬಗೆಹರಿಸುವುದಾಗಿ ಹೇಳುತ್ತಿದ್ದಾರೆ. ಗೋವಾ ಸಿಎಂ ಜತೆ ಯಡಿಯೂರಪ್ಪ ಮತ್ತು ಅಮಿತ್‌ ಶಾ ಮಾತನಾಡಿದರೆ ಸಮಸ್ಯೆ ಇತ್ಯರ್ಥವಾಗಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ರಾಜ್ಯದ ಜನರಿಗೆ ಸುಳ್ಳು ಹೇಳುತ್ತಾ ಮೂಗಿಗೆ ತುಪ್ಪ ಸವರಲು ಮುಂದಾಗಿದ್ದಾರೆ. ಮಹದಾಯಿ ಕರ್ನಾಟಕ, ಗೋವಾ ಮಾತ್ರವಲ್ಲ ಮಹಾರಾಷ್ಟ್ರ ರಾಜ್ಯಗಳ ಅಂತಾರಾಜ್ಯ ಸಮಸ್ಯೆ. ಹೀಗಾಗಿ ಸಮಸ್ಯೆ ಇತ್ಯರ್ಥಕ್ಕೆ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಬೇಕು. ಇದಕ್ಕಾಗಿಯೇ ಪ್ರಧಾನಿ ಬಳಿಗೆ ರಾಜ್ಯದಿಂದ ಸರ್ವ ಪಕ್ಷಗಳ ನಿಯೋಗ ಕರೆದೊಯ್ದರೂ ರಾಜ್ಯದ ಬಿಜೆಪಿ ಸಂಸದರು ಬಾಯಿ ಬಿಡಲಿಲ್ಲ ಎಂದರು.

ಮಹದಾಯಿ ವಿವಾದ ಇತ್ಯರ್ಥಕ್ಕೆ ನ್ಯಾಯಾಧಿಕರಣದ ಸಲಹೆ ಮೇರೆಗೆ ಗೋವಾ ರಾಜ್ಯದೊಂದಿಗೆ ಮಾತುಕತೆ ನಡೆಸಲು ಕರ್ನಾಟಕ ಸರ್ಕಾರ ಈಗಲೂ ಸಿದ್ಧವಿದೆ. ಈ ಕುರಿತು ಕಾನೂನಾತ್ಮಕ ಪ್ರಕ್ರಿಯೆಗಳು ನಡೆಯಬೇಕೇ ಹೊರತು ಯಡಿಯೂರಪ್ಪ, ಅಮಿತ್‌ ಶಾ ಹೇಳಿದರೆ ಸಮಸ್ಯೆ ಪರಿಹಾರ ಕಾಣಲು ಸಾಧ್ಯವಿಲ್ಲ ಎಂದು ಹೇಳಿದರು.

ಗೋವಾ ಸಿಎಂ ನನಗೆ ಪತ್ರ ಬರೆಯಬೇಕು, ನ್ಯಾಯಾಧಿಕರಣದ ಮುಂದೆ ಅಫಿಡವಿಟ್‌ ಸಲ್ಲಿಸಬೇಕು. ಯಡಿಯೂರಪ್ಪ ಜೊತೆ ಚರ್ಚಿಸಿದರೆ ಮಹದಾಯಿ ವಿವಾದ ಬಗೆಹರಿಯುತ್ತದೆಯೇ. ಇಷ್ಟಕ್ಕೂ ಯಡಿಯೂರಪ್ಪ ಅವರೇನು ರಾಜ್ಯದ ಮುಖ್ಯಮಂತ್ರಿಯೇ ಎಂದು ಪ್ರಶ್ನಿಸಿದರು. ಈ ಬಗ್ಗೆ ಎರಡು ವರ್ಷಗಳಿಂದ ಹೋರಾಟ ನಡೆಯುತ್ತಿದ್ದರೂ ಸುಮ್ಮನಿದ್ದು ಈಗೇಕೆ ವಿಷಯ ಪ್ರಸ್ತಾಪಿಸುತ್ತಿದ್ದಾರೆ ಎಂದು ಟೀಕಿಸಿದರು.

-ಉದಯವಾಣಿ

Comments are closed.