
ಮಂಗಳೂರು, ಡಿಸೆಂಬರ್.22: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರಕಾರದ ಚಿಹ್ನೆ ಬಳಸಿ ಕೋಟ್ಯಾಂತರ ರೂಪಾಯಿಗಳನ್ನು ಚುನಾವಣೆಗಾಗಿ ಖರ್ಚು ಮಾಡುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಪ್ರಚಾರಕ್ಕಾಗಿ ಇಲಾಖೆಗಳ ಮೂಲಕ ಖರ್ಚು ಮಾಡಲಾದ ಹಣದ ಬಗ್ಗೆ ಶ್ವೇತ ಪತ್ರವನ್ನು ಹೊರಡಿಸಲಿ ಎಂದು ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಸವಾಲೆಸೆದಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಬರುತ್ತಿರುವುದು ಚುನಾವಣಾ ಪ್ರೇರಿತ ರಾಜಕೀಯ ಪ್ರವಾಸ ಎಂದು ಲೇವಾಡಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿಯರ ವಿದೇಶ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಒಬ್ಬ ಪ್ರಧಾನಿ ದೇಶದ ಗೌರವ ಹೆಚ್ಚಿಸಲು ಆಮಂತ್ರದ ಮೇರೆಗೆ ವಿದೇಶ ಪ್ರವಾಸ ಮಾಡುತ್ತಾರೆ. ಮಾತ್ರವಲ್ಲದೆ ರಾಷ್ಟ್ರೀಯ ವಿಪತ್ತಿನ ಹಿನ್ನೆಲೆಯಲ್ಲಿ ಲಕ್ಷದ್ವೀಪ, ಕೇರಳ, ತಮಿಳುನಾಡು ಮೊದಲಾದೆಡೆ ಪರಿಹಾರ ಕಾರ್ಯಗಳಿಗಾಗಿ ಹೋಗಿದ್ದಾರೆ. ಲಕ್ಷದ್ವೀಪಕ್ಕೆ ತೆರಳಲು ಅವರು ಮಂಗಳೂರಿನಲ್ಲಿ ತಂಗಿದ್ದು, ಸಾಮಾನ್ಯ ಪ್ರಜೆಯಾಗಿ ಸರ್ಕ್ಯೂಟ್ ಹೌಸನ್ನು ಬಳಸಿಕೊಂಡಿದ್ದರು ಎಂದರು.

ಗುಜರಾತ್ ಚುನಾವಣೆ ಬಳಿಕ ರಾಜ್ಯದಲ್ಲಿ ಹೊಸ ಗಾಳಿ ಬೀಸುತ್ತಿದೆ. ಅದರ ಜತೆಯಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ಮಂಗಳೂರಿಗೆ ಬಂದು ಸಂಭ್ರಮಾಚರಣೆಯ ಮೂಲಕ ಕಾರ್ಯಕರ್ತರಿಗೆ ಪ್ರೇರಣೆ ನೀಡಿದ್ದಾರೆ. ಈ ನಡುವೆ ಕಾಂಗ್ರೆಸ್ ನಾಯಕರು ಅಲ್ಪಸಂಖ್ಯಾತ ಸಂಘಟನೆಗಳನ್ನು ಓಲೈಸುವ ಕೆಲಸ ಮಾಡುತ್ತಿದೆ.
ಆ ಪಕ್ಷಕ್ಕೆ ಒಬ್ಬಂಟಿಯಾಗಿ ಸ್ಪರ್ಧಿಸುವ ಮನಸ್ಥಿತಿ ಇಲ್ಲದ ಕಾರಣ ಎಸ್ಡಿಪಿಐ, ಪಿಎಫ್‌ಐ ಸಂಘಟನೆಯ ಅಧ್ಯಕ್ಷರ ಜತೆ ಪಕ್ಷದ ರಾಜ್ಯಾಧ್ಯಕ್ಷರು ಮಾತುಕತೆ ನಡೆಸುತ್ತಿದ್ದಾರೆ. ಗುಜರಾತ್ ಚುನಾವಣೆಯ ವೇಳೆ ಪಾಕಿಸ್ತಾನದ ಜತೆ ಹಾಗೂ ಕಾಶ್ಮೀರಿ ಭಯೋತ್ಪಾದಕರ ಜತೆ ಮಾತುಕತೆ ಮಾಡಿದ್ದ ಕಾಂಗ್ರೆಸ್ ಇದೀಗ ಕರ್ನಾಟಕದಲ್ಲಿ ಚುನಾವಣೆಗೆ ಯಾವುದಕ್ಕೂ ಹೇಸದಂತಿದೆ ಎಂದು ಅವರು ಆಪಾದಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್‌ನ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಮಾಜಿ ಜಿಲ್ಲಾಧ್ಯಕ್ಷ ರವಿಶಂಕರ ಮಿಜಾರು,ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ವೇದವ್ಯಾಸ ಕಾಮತ್, ಪ್ರಮುಖರಾದ ಜಿತೇಂದ್ರ ಕೊಟ್ಟಾರಿ ಮುಂತಾದವರು ಉಪಸ್ಥಿತರಿದ್ದರು.
Comments are closed.