ಕರ್ನಾಟಕ

ಗಣಪತಿ ಆತ್ಮ”ಹತ್ಯೆ’? ಡಿವೈಎಸ್‌ಪಿ ಸಾವು ಪ್ರಕರಣಕ್ಕೆ ಟ್ವಿಸ್ಟ್‌

Pinterest LinkedIn Tumblr


ಬೆಂಗಳೂರು: ರಾಜ್ಯ ಗೃಹ ಸಚಿವ ಕೆ.ಜೆ. ಜಾರ್ಜ್‌ ರಾಜೀನಾಮೆಗೆ ಕಾರಣವಾಗಿದ್ದ ಡಿವೈಎಸ್ಪಿ ಎಂ.ಕೆ. ಗಣಪತಿ ಶಂಕಾಸ್ಪದ ಸಾವಿನ ಪ್ರಕರಣ ಈಗ ಹೊಸ ತಿರುವು ಪಡೆದಿದೆ. ಜಾರ್ಜ್‌ ಅವರನ್ನು ರಕ್ಷಿಸಲು ರಚನೆಯಾಗಿತ್ತೆಂದು ವಿರೋಧ ಪಕ್ಷಗಳಿಂದ ಟೀಕೆಗೆ ಒಳಗಾಗಿದ್ದ ನ್ಯಾಯಾಂಗ ವಿಚಾರಣೆ ಆಯೋಗ ಈಗ ಗಣಪತಿ ಹತ್ಯೆಯಾಗಿರಬಹುದೇ ಎಂದು ಪ್ರಬಲ ಶಂಕೆ ವ್ಯಕ್ತಪಡಿಸಿದೆ!

ಗಣಪತಿ ಸಾವು ಆತ್ಮಹತ್ಯೆಯೋ..? ಕೊಲೆಯೋ..? ಎಂಬ ಅಂಶಗಳ ಬಗ್ಗೆ ಸಂಪೂರ್ಣ ವರದಿಯನ್ನು ಜ. 15ರ ಒಳಗೆ ವಿಚಾರಣಾ ಆಯೋಗ ರಾಜ್ಯ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಲಿದ್ದು, ಗಣಪತಿ ಪ್ರಕರಣದ ಸತ್ಯಾಸತ್ಯತೆ ಸ್ಪಷ್ಟವಾಗಿ ಗೊತ್ತಾಗಲಿದೆ.

ಸುಪ್ರೀಂಕೋರ್ಟ್‌ ಆದೇಶದಂತೆ ತನಿಖೆ ಕೈಗೆತ್ತಿಕೊಡಿರುವ ಸಿಬಿಐ ಕೂಡ ಗಣಪತಿ ಸಾವು ಆತ್ಮಹತ್ಯೆ ಬದಲಿಗೆ ಕೊಲೆಯಾಗಿರಬಹುದೇ ಎಂಬ ಅನುಮಾನದಲ್ಲಿದೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ. ಗಣಪತಿ ತಂಗಿದ್ದ ಲಾಡ್ಜ್ಗೆ ಸಿಬಿಐ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದಾಗ, ಸ್ಥಳದಲ್ಲಿ ಸಿಕ್ಕ ಗುಂಡಿನ ಕುರುಹು ತನಿಖಾ ದೃಷ್ಟಿಯನ್ನು ಬದಲಿಸಿತ್ತು. ಈಗ ವಿಚರಣಾ ಆಯೋಗದ ದೃಷ್ಟಿಯೂ ಅದೇ ಜಾಡಿನತ್ತ ಹೊರಳುತ್ತಿದೆ ಎಂಬ ಸ್ಫೋಟಕ ಮಾಹಿತಿ “ಉದಯವಾಣಿ’ಗೆ ಲಭ್ಯವಾಗಿದೆ.

ಗಣಪತಿ ಆತ್ಮಹತ್ಯೆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ಕೇಶವನಾರಾಯಣ ನೇತೃತ್ವದ ನ್ಯಾಯಾಂಗ ತನಿಖಾ ಆಯೋಗ ಹಾಗೂ ಸಿಬಿಐ ಸಂಸ್ಥೆ, ಗಣಪತಿ ಅವರದ್ದು ಆತ್ಮಹತ್ಯೆ ಬದಲಿಗೆ ಕೊಲೆಯಾಗಿರಬಹುದು ಎನ್ನುವ ಸಾಧ್ಯತೆಗಳ ಬಗ್ಗೆ ತನಿಖೆ ನಡೆಸುತ್ತಿವೆ.

ನ್ಯಾಯಾಂಗ ವಿಚಾರಣೆ ಆಯೋಗಕ್ಕಂತೂ ಇಲ್ಲಿಯವರೆಗೆ ಲಭ್ಯವಾಗಿರುವ ಮಾಹಿತಿಗಳು, ಸಾಕ್ಷ್ಯಾಧಾರಗಳು, ತನಿಖೆಯಲ್ಲಿನ ಲೋಪದೋಷ, ಮಹತ್ವದ ಸಾಕÏéಗಳ ನಾಶ ಹಾಗೂ ತಿರುಚಿದ ಸಾಕ್ಷ್ಯಾಧಾರಗಳ ಸಲ್ಲಿಕೆ ಕುರಿತಾದ ಮಾಹಿತಿಗಳನ್ನು ಗಮನಿಸಿದಾಗ ಪೋಲಿಸ್‌ ಅಧಿಕಾರಿ ಗಣಪತಿಯದ್ದು ಎಲ್ಲರೂ ಭಾವಿಸಿರುವ ಹಾಗೆ ಆತ್ಮಹತ್ಯೆಯಲ್ಲ, ಕೊಲೆ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ ಎನ್ನಲಾಗಿದೆ.

ಗಣಪತಿ ಪ್ರಕರಣದ ಕುರಿತು ಕೊಡಗು ಜಿಲ್ಲಾ ಪೊಲೀಸ್‌ ಹಾಗೂ ತನಿಖಾಧಿಕಾರಿಗಳು ಸಲ್ಲಿಸಿರುವ ಸಾಕ್ಷ್ಯಾಧಾರಗಳ ಸಾಚಾತನದ ಬಗ್ಗೆ ನ್ಯಾಯಾಂಗ ತನಿಖಾ ಆಯೋಗ ಸಂದೇಹ ವ್ಯಕ್ತಪಡಿಸಿ, ತಾನೇ ಖುದ್ದಾಗಿ ವಿಧಿವಿಜ್ಞಾನ ಪ್ರಯೋಗಾಲಯದಿಂದ ಪರೀಕ್ಷೆ ನಡೆಸಿ ವರದಿ ತರಿಸಿಕೊಂಡಿದೆ. ಫೊರೆನ್ಸಿಕ್‌ ಲ್ಯಾಬ್‌ ವರದಿಗೂ, ತನಿಖಾಧಿಕಾರಿಗಳು ಸಲ್ಲಿಸಿದ ವರದಿಗೂ ಅಜಗಜಾಂತರ ವ್ಯತ್ಯಾಸವಿರುವುದು ವಿಚಾರಣೆ ಆಯೋಗದ ಸಂದೇಹವನ್ನು ಹೆಚ್ಚಿಸಿದೆ ಎಂದು ಹೇಳಲಾಗಿದೆ.

“”ಪೊಲೀಸ್‌ ಅಧಿಕಾರಿ ಗಣಪತಿ ಆತ್ಮಹತ್ಯೆಯಾಗಿದ್ದರೆ ಸಾಕ್ಷ್ಯಗಳನ್ನೇಕೆ ಏಕೆ ನಾಶಪಡಿಸಬೇಕಿತ್ತು, ತಿರುಚಲಾದ ಸಾಕ್ಷಾಧಾರಗಳನ್ನು ಏಕೆ ಒದಗಿಸಬೆಕಿತ್ತು ಎನ್ನುವ ಪ್ರಶ್ನೆ ಆಯೋಗವನ್ನ ಕಾಡತೊಡಗಿದೆ. ವಿವಿಧ ಆಯಾಮಗಳಲ್ಲಿ ತಜ್ಞರ ಅಭಿಪ್ರಾಯ ಪಡೆದು ಆಯೋಗ ಆಳವಾದ ಅಧ್ಯಯನ ನಡೆಸಿದೆ,” ಎಂದು ಮೂಲಗಳು ತಿಳಿಸಿವೆ.

ಮಾಧ್ಯಮಕ್ಕೆ ಗಣಪತಿಯವರು ತಮ್ಮ ಸಾವು ಸಂಭವಿಸುವ ಮುನ್ನ ನೀಡಿರುವ ಸಂದರ್ಶನದ ವಿಡಿಯೋ ಬಗ್ಗೆಯೂ ಆಯೋಗವು ಕೂಲಂಕಶ ವಿಚಾರಣೆ ನಡೆಸಿದೆ. ಪರಿಣಿತ ಮನಶಾಸ್ತ್ರಜ್ಞರನ್ನ ಸಂಪರ್ಕಿಸಿ ಗಣಪತಿಯವರ ಮನಸ್ಥಿತಿ, ಮಾನಸಿಕ ಖನ್ನತೆ, ಮುಖದಲ್ಲಿನ ಹಾವ-ಭಾವ, ಬಳಸಿದ ಭಾಷೆ ಅದರ ಹಿಂದಿನ ಅರ್ಥ ಇತ್ಯಾದಿಗಳ ಮಾಹಿತಿ ಪಡೆದಿದೆ ಎಂದು ತಿಳಿದುಬಂದಿದೆ.

ನೇಣೇ…ಯಾಕೆ..?
ಒಂದು ವೇಳೆ ಗಣಪತಿಯವರು ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿದ್ದರೆ ನೇಣನ್ನೇ ಏಕೆ ಹಾಕಿಕೊಂಡರು? ಅವರ ಬಳಿ ಇದ್ದ ಸರ್ವೀಸ್‌ ರಿವಾಲ್ವರ್‌ನಿಂದಲೇ ಗುಂಡು ಹಾರಿಸಿಕೊಳ್ಳಬಹುದಿತ್ತಲ್ಲಾ? ಎನ್ನುವ ಪ್ರಶ್ನೆ ಸಹ ಉದ್ಭವವಾಗಿದ್ದು, ಅದರ ಬಗ್ಗೆಯೂ ವಿಚಾರಣೆ ನಡೆಯುತ್ತಿದೆ ಎನ್ನಲಾಗಿದೆ. ನೇಣು ಬಿಗಿದುಕೊಂಡ ಫ್ಯಾನಿನ ಮೇಲೆ ಇದ್ದ ಬೆರಳಚ್ಚಿನ ಮಾಹಿತಿ ಸಂಗ್ರಹಿಸದಿರುವ ಬಗ್ಗೆ ತನಿಖಾಧಿಕಾರಿಗಳ ನಡೆಯ ಬಗ್ಗೆ ಸಂದೇಹ ವ್ಯಕ್ತವಾಗಿದ್ದು, ಈ ಕುರಿತೂ ಆಯೋಗ ಗಂಭೀರವಾಗಿ ವಿಚಾರಣೆ ನಡೆಸಿದೆ ಎಂದು ಹೇಳಲಾಗಿದೆ.

ಗಣಪತಿ ಪ್ರಕರಣದ ಬಗ್ಗೆ ಎಲ್ಲಾ ಆಯಾಮಗಳಲ್ಲೂ ವಿಚಾರಣೆ ನಡೆಸಿ ತನಿಖೆ ಪೂರ್ಣಗೊಳಿಸಲಾಗಿದೆ. ಜ. 15ರ ಒಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.
– ನಿವೃತ್ತ ನ್ಯಾ. ಕೇಶವನಾರಾಯಣ, ತನಿಖಾ ಆಯೋಗದ ಮುಖ್ಯಸ್ಥ

ಆಯೋಗ ಶಂಕೆಗೆ ಕಾರಣಗಳು :
* ತಿರುಚಲಾದ ಲಾಡ್ಜ್ ಸಿಸಿ ಟಿವಿ ಫ‌ೂಟೇಜ್‌
* ಸಿಸಿ ಟಿವಿ ಫ‌ೂಟೇಜ್‌ ವಿಧಿವಿಜಾ`ನ ಪರೀಕ‚ಗೆ ಒಳಪಡಿಸದೇ ಇರುವುದು
* ಸಕಾಲಕ್ಕೆ ಫಾರೆನ್ಸಿಕ್‌ ತಜ್ಞರನ್ನು ಕರೆಸದೇ ಇರುವುದು
* ಸಿಸಿಟಿವಿ ಫ‌ೂಟೇಜ್‌ ಬಗ್ಗೆ ತಪ್ಪು ಮಾಹಿತಿ
* ಶರಿಯಾಗಿ ನಡೆಯದ ಸ್ಥಳ ಮಹಜರು
* ಕೊಠಡಿಯೊಳಗೆ ಎರಡು ಬುಲೆಟ್‌ ಫೈರ್‌ ಆಗಿರುವ ಬಗ್ಗೆ ಮಾಹಿತಿ

– ಸೋಮಶೇಖರ್‌ ಕವಚೂರು

– ಉದಯವಾಣಿ

Comments are closed.