ಕರಾವಳಿ

FB, ವಾಟ್ಸಾಪ್ ಕಿಡಿಗೇಡಿಗಳಿಗೆ ಕುಂದಾಪುರ ಪೊಲೀಸರಿಂದ ಖಡಕ್ ಎಚ್ಚರಿಕೆ!

Pinterest LinkedIn Tumblr

ಕುಂದಾಪುರ: ಇತ್ತೀಚೆಗೆ ಉತ್ತರಕನ್ನಡದಲ್ಲಿ ನಡೆಯುತ್ತಿರುವ ಕೆಲವು ಅಹಿತಕರ ಘಟನೆಗಳಿಗೆ ಸಾಮಾಜಿಕ ಜಾಲತಾಣಗಳ ಸಂದೇಶಗಳು ಕಾರಣವಾಗಿರುವ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಫೇಸ್‌ಬುಕ್‌ಗಳಲ್ಲಿ ಸುಳ್ಳು ವದಂತಿಗಳನ್ನು ಸೃಷ್ಟಿಸಿ ಶೇರ್ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸೌಹಾರ್ದ ಕದಡುವ ವಿಕೃತಿಗಳಿಗೆ ಕುಂದಾಪುರ ಪೊಲೀಸರು ಖಡಕ್ ವಾರ್ನಿಂಗ್ ನೀಡಿದ್ದಾರೆ.

ಸುಳ್ಳು ಸುದ್ದಿ ಹರಡಿದರೇ ಜೈಲು ಗ್ಯಾರೆಂಟಿ!
ಸುಳ್ಳು ವದಂತಿಗಳನ್ನು ಸೃಷ್ಠಿಸಿ ಸಮಾಜದ ವಿವಿಧ ಜಾತಿ-ಮತಗಳ ನಡುವಿನ ಭಾವೈಕ್ಯತೆಗೆ ನಿರಂತರವಾಗಿ ಭಂಗ ತರುತ್ತಾ, ಪ್ರಚೋದನಾಕಾರಿ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಹಾಗೂ ಶೇರ್ ಮಾಡುವುದು ಒಂದು ಗಂಭೀರವಾದ ಅಪರಾಧವಾಗಿದೆ. ಇಂತಹ ಕಿಡಿಗೇಡಿಗಳು ತಮ್ಮ ವಿಕೃತ ಮನೋಕಾಮನೆಗಳನ್ನು ತೀರಿಸಿಕೊಳ್ಳಲು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದು, ಅಂತಹವರ ವಿರುದ್ದ ಪೊಲೀಸ್ ಇಲಾಖೆ ಕಣ್ಣಿಟ್ಟಿದೆ. ಈ ರೀತಿ ವಾಟ್ಸಪ್, ಫೇಸ್‌ಬುಕ್‌ಗಳಲ್ಲಿ ಸಾಮಾಜಿಕ ಸ್ವಾಸ್ಥ್ಯ ಮತ್ತು ಸಾಮರಸ್ಯ ಹಾಳುಗೆಡವುತ್ತಾ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ, ಸಾರ್ವಜನಿಕ ನೆಮ್ಮದಿಗೆ ಭಂಗ ತರುತ್ತಿರುವವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

(ಕುಂದಾಪುರ ಪಿಎಸ್ಸೈ ಹರೀಶ್ ನಾಯ್ಕ್)

ಶೇರ್‍ ಮಾಡುವಾಗ ಹುಷಾರ್!
ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುಳ್ಳು ಹಾಗೂ ಪ್ರಚೋದನಾಕಾರಿ ಸಂದೇಶಗಳಿಗೆ ಕಿವಿಗೊಡದೇ ಯಾವುದು ಸತ್ಯ, ಯಾವುದು ಸುಳ್ಳು ಎಂದು ಅಧಿಕೃತವಾಗಿ ಮಾಹಿತಿ ಪಡೆದುಕೊಳ್ಳದೇ ಕೇವಲ ವಾಟ್ಸಾಪ್, ಫೇಸ್‌ಬುಕ್‌‍ಗಳಲ್ಲಿ ಪ್ರಸಾರವಾಗುವ ಮಾಹಿತಿಗಳನ್ನು ನಂಬಬಾರದು. ಸಮಾಜದ ಶಾಂತಿ ಕಾಪಾಡುವಲ್ಲಿ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

Comments are closed.