ಮಂಗಳೂರು, ಡಿಸೆಂಬರ್.15: ಜಪ್ಪಿನಮೊಗರು ಸಮೀಪದ ನೇತ್ರಾವದಿ ನದಿಗೆ ಹಾರಿ ಮೆಸ್ಕಾಂ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಸಂಜೆ ನಡೆದಿದೆ.
ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿಯನ್ನು ಮಂಗಳೂರಿನ ಅತ್ತಾವರದ ನಿವಾಸಿ ಕೆ. ರಹ್ಮಾನ್ (58) ಎಂದು ಹೆಸರಿಸಲಾಗಿದೆ.
ಶಿರ್ವದಲ್ಲಿ ಸೆಕ್ಷನ್ ಆಫೀಸರ್ ಆಗಿದ್ದ ಅವರು ಇತ್ತೀಚೆಗೆ ವರ್ಗಾವಣೆಗೊಂಡಿದ್ದರು ಎನ್ನಲಾಗಿದೆ. ಪ್ರತಿ ವಾರಾಂತ್ಯಕ್ಕೆ ಅತ್ತಾವರದಲ್ಲಿರುವ ತನ್ನ ಮನೆಗೆ ಬಂದು ಹೋಗುತ್ತಿದ್ದ ಅವರು ಶನಿವಾರವೂ ಮನೆಗೆ ಬಂದಿದ್ದರು ಎನ್ನಲಾಗಿದೆ.
ಸೋಮವಾರ ಉಡುಪಿಗೆ ತೆರಳಿದ್ದ ಅವರು ಗುರುವಾರ ಅಪರಾಹ್ನ ಸುಮಾರು 3:30ಕ್ಕೆ ಏಕಾಎಕಿ ನೇತ್ರಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಕ್ಷಣ ವಾಹನಿಗರು ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದರು. ಅದರಂತೆ ಕಾರ್ಯಾಚರಣೆ ನಡೆಸಿದರೂ ಕೂಡ ಅವರನ್ನು ಪಾರು ಮಾಡಲು ಸಾಧ್ಯವಾಗಲಿಲ್ಲ. ಸಾರ್ವಜನಿಕರ ಸಹಕಾರದೊಂದಿಗೆ ಪೊಲೀಸರು ಹುಡುಕಾಟ ನಡೆಸಿದಾಗ ಸೇತುವೆಯ ಸನಿಹದಲ್ಲೇ ರಹ್ಮಾನ್ರ ಮೃತದೇಹ ಪತ್ತೆಯಾಗಿದೆ.
ಸೋಮವಾರ ತನ್ನ ಪತ್ನಿಗೆ ಕರೆ ಮಾಡಿ ಮಾತನಾಡಿದ್ದ ಅವರು ಗುರುವಾರ ನಗರಕ್ಕೆ ಬಂದಿರುವುದು ಮನೆ ಮಂದಿಗೆ ಗೊತ್ತಿರಲಿಲ್ಲ ಎನ್ನಲಾಗಿದೆ.ರಹ್ಮಾನ್ರ ಪುತ್ರಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದು, ಎಪ್ರಿಲ್ನಲ್ಲಿ ಆಕೆಯ ವಿವಾಹ ನಿಗದಿಯಾಗಿದೆ. ಅವರ ಪುತ್ರ ನಗರದ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾರೆ.
ಆತ್ಮಹತ್ಯೆಗೆ ಕಾರಣ ಏನು ಎಂಬುದು ತಿಳಿದಿಲ್ಲ. ಮೃತದೇಹವನ್ನು ವೆನ್ಲಾಕ್ ಶವಗಾರದಲ್ಲಿಡಲಾಗಿದೆ. ಪ್ರಕರಣ ಕಂಕನಾಡಿ ನಗರ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Comments are closed.