
ಮಂಗಳೂರು, ಡಿಸೆಂಬರ್.13: ಜಿಲ್ಲೆಯಲ್ಲಿ ನಿರಂತರವಾಗಿ ಶಾಂತಿ ಕದಡುವ ಯತ್ನಗಳು ನಡೆಯುತ್ತಲೇ ಇವೆ, ಕೊಲೆಗಳು ನಡೆದಿವೆ, ಹಾಗಿದ್ದರೂ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲರಾಗಿರುವ ಸಚಿವ ರೈ ತಮ್ಮ ಆಡಳಿತ ವೈಫಲ್ಯವನ್ನು ಮುಚ್ಚಿ ಹಾಕಲು ಸಾಮರಸ್ಯ ಯಾತ್ರೆಯ ನಾಟಕವಾಡುತ್ತಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಮಂಗಳೂರಿನ ಪಕ್ಷದ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಸಚಿವ ರೈ ಅಸಮರ್ಥ ಆಡಳಿತವೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮರಸ್ಯಕ್ಕೆ ತೊಡಕಾಗಿದೆ. ತಮ್ಮ ಆಡಳಿತ ವೈಫಲ್ಯವನ್ನು ಮುಚ್ಚಿ ಹಾಕಲು ಸಚಿವ ರಮಾನಾಥ ರೈ ಹಮ್ಮಿಕೊಂಡಿರುವ ‘ಸಾಮರಸ್ಯ ನಡಿಗೆ’ ಪಾದಯಾತ್ರೆ ಬದಲು ತೀರ್ಥಯಾತ್ರೆ ಮಾಡಿದ್ದರೆ ಪುಣ್ಯವಾದರೂ ಸಿಗುತ್ತಿತ್ತು ಎಂದು ಟಾಂಗ್ ನೀಡಿದರು.

ಮುಂದಿನ ಚುನಾವಣೆಯಲ್ಲಿ ಸೋಲಿನ ಭೀತಿ ಸಚಿವ ರೈ ಅವರನ್ನು ಕಾಡುತ್ತಿದೆ. ಅದಕ್ಕಾಗಿ ನಡಿಗೆ ನಡೆಸುತ್ತಿದ್ದಾರೆ. ಕೇರಳದಲ್ಲಿ ಹತ್ಯಾಕಾಂಡ ನಡೆಸುತ್ತಿರುವ ಸಿಪಿಐಎಂ ಜತೆ ಸೇರಿ ಸಾಮರಸ್ಯ ಸಾರುತ್ತಿರುವುದು ವಿಪರ್ಯಾಸ ಎಂದು ನಳಿನ್ ಕುಮಾರ್ ಕಿಡಿಕಾರಿದರು.
“ಕೇವಲ ಬಂಟ್ವಾಳ ಕ್ಷೇತ್ರದಲ್ಲಿ ಮಾತ್ರ ಪಾದಯಾತ್ರೆ ನಡೆಸಲು ಸಚಿವರು ಬಂಟ್ವಾಳ ತಾಲೂಕಿನ ಉಸ್ತುವಾರಿ ಸಚಿವರಲ್ಲ; ಇಡೀ ಜಿಲ್ಲೆಯ ಉಸ್ತುವಾರಿ ಸಚಿವರು, ತಮ್ಮ ಕ್ಷೇತ್ರದಲ್ಲಿ ಮಾತ್ರ ಪಾದಯಾತ್ರೆ ಮಾಡುವ ಮೂಲಕ ಸಚಿವ ರಮಾನಾಥ್ ರೈ ಓಟಿನ ಬೇಟೆಯ ನಾಟಕ ಆರಂಭಿಸಿದ್ದಾರೆ ಎಂದು ಅವರು ದೂರಿದರು.
ಜಿಲ್ಲೆಯಲ್ಲಿ ಮಂಗಳೂರಿನಿಂದ ಸಂಪಾಜೆ ವರೆಗೆ ಸಾಮರಸ್ಯ ಯಾತ್ರೆ ನಡೆಸಲಿ, ಇಲ್ಲವೇ ಎಷ್ಟು ಕೊಲೆಗಳಾಗಿವೆ, ಸಚಿವರು ಎಷ್ಟು ಮಂದಿ ಕಳ್ಳರು, ದರೋಡೆ ಆರೋಪಿಗಳನ್ನು ಬಿಡಿಸುವಂತೆ ಪೊಲೀಸರಿಗೆ ಫೋನ್ ಮಾಡಿದ್ದೀರಿ ಎನ್ನುವುದು ತನಿಖೆಯಾಗಲಿ ಎಂದು ಹೇಳಿದರು.
ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಪ್ರಧಾನ ಕಾರ್ಯದರ್ಶಿ ಕಿಶೋರ ರೈ, ಪ್ರಮುಖರಾದ ಕ್ಯಾ.ಬೃಜೇಶ್ ಚೌಟ, ನಿತಿನ್ ಕುಮಾರ್, ಹರೀಶ್ ಪೂಂಜ, ಜೀತೇಂದ್ರ ಕೊಟ್ಟಾರಿ, ಸುದರ್ಶನ ಮೂಡುಬಿದಿರೆ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Comments are closed.