
ಹೊಸದಿಲ್ಲಿ: ತುಂಬಾ ವರ್ಷಗಳ ಹಿಂದೆ ಭೂಮಿ ಮೇಲೆ ಡೈನೋಸಾರ್ಗಳ ಅಂತ್ಯಕ್ಕೆ ಕಾರಣವಾದ ಭಾರಿ ಕ್ಷುದ್ರಗ್ರಹ ಈಗ ಮಾನವ ಜನಾಂಗವನ್ನು ಕಾಡುತ್ತಿರುವ ಕ್ಯಾನ್ಸರ್ಗೆ ಔಷಧಿಯಾಗಿ ಬದಲಾಗಿದೆಯಾ? ಈ ಬಗ್ಗೆ ಹೊಸ ಸಂಶೋಧನೆಯೊಂದು ಭಾರಿ ಸಂಚಲನಕ್ಕೆ ಕಾರಣವಾಗಿದೆ.
ಅರುವತ್ತಾರು ಮಿಲಿಯನ್ ವರ್ಷಗಳ ಹಿಂದೆ ಚಿಕ್ಸುಲುಬ್ ಎಂಬ ಭಾರಿ ಕ್ಷುದ್ರಗ್ರಹ ಭೂಮಿಗೆ ಡಿಕ್ಕಿ ಹೊಡೆದ ಕಾರಣ ಡೈನೋಸಾರ್ಗಳು ನಿರ್ನಾಮವಾಗಿದ್ದು ಗೊತ್ತೇ ಇದೆ. ಆ ಕ್ಷುದ್ರಗ್ರಹಗಳಲ್ಲಿ ಇರುವ ಇರಿಡಿಯಂ ಎಂಬ ಲೋಹಕ್ಕೆ ಕ್ಯಾನ್ಸರ್ ಕಣಗಳನ್ನು ನಾಶಪಡಿಸುವ ಗುಣ ಇದೆ ಎಂದು ತಾಜಾ ಸಂಶೋಧನೆಯಲ್ಲಿ ತಿಳಿದುಬಂದಿದೆ.
ಬ್ರಿಟನ್ನಲ್ಲಿನ ಯೂನಿವರ್ಸಿಟಿ ಆಫ್ ವಾರ್ವಿಕ್ನ ಸಂಶೋಧಕ ಪೀಟರ್ ಶಾಡ್ಲರ್ ಮಾತನಾಡುತ್ತಾ, ‘ಕ್ಷುದ್ರಗ್ರಹದ ಮೂಲಕ ಭೂಮಿಗೆ ಸೇರಿದ ಇರಿಡಿಯಂ ಲೋಹವನ್ನು 1803ರಲ್ಲಿ ಕಂಡುಹಿಡಿದರು. ಈ ಲೋಹದಿಂದ ತಯಾರಿಸಿದ ಸಂಯುಕ್ತವನ್ನು ಕ್ಯಾನ್ಸರ್ ರೋಗಿಯ ದೇಹದೊಳಕ್ಕೆ ಕಳುಹಿಸಿದರೆ, ಅದು ನೇರವಾಗಿ ಕ್ಯಾನ್ಸರ್ ಕಣಗಳ ಮೇಲೆ ದಾಳಿ ಮಾಡಿ ನಾಶಪಡಿಸುತ್ತದೆ. ಕ್ಯಾನ್ಸರ್ ಕಣಗಳನ್ನು ಟಾರ್ಗೆಟ್ ಮಾಡಲು ಬಳಸುವ ಲೇಸರ್ ಲೈಟ್ ಚಿಕಿತ್ಸೆ, ಫೋಟೋ ಕೆಮೋಥೆರಪಿ ಮೂಲಕ ಈ ಸಂಯುಕ್ತವನ್ನು ಕಳುಹಿಸಬಹುದು’ ಎಂದಿದ್ದಾರೆ.
ಸಂಶೋಧಕರು ಪ್ರಯೋಗಾಲಯದಲ್ಲಿ ಸೃಷ್ಟಿಸಿದ ಶ್ವಾಸಕೋಶಗಳ ಟ್ಯೂಮರ್ ಮೇಲೆ ಇದನ್ನು ಪ್ರಯೋಗಿಸಿದ್ದಾರೆ. ಈ ಸಂದರ್ಭದಲ್ಲಿ ಕ್ಯಾನ್ಸರ್ ಕಣಗಳು ಕ್ರಮೇಣ ಶಕ್ತಿಗುಂದುವುದನ್ನು ಗಮನಿಸಿದರು. ದೇಹದಲ್ಲಿರುವ ಆರೋಗ್ಯಕರವಾದ ಕಣಗಳಿಗೆ ಯಾವುದೇ ರೀತಿ ನಷ್ಟ ಉಂಟು ಮಾಡದೆ ಅದು ಕೇವಲ ಕ್ಯಾನ್ಸರ್ ಕಣಗಳನ್ನು ಗುರಿಯಾಗಿಸಿಕೊಂಡಿದ್ದಾಗಿ ಸಂಶೋಧಕರು ತಿಳಿಸಿದ್ದನ್ನು ‘ವಾರ್ವಿಕ್’ ತನ್ನ ವೆಬ್ಸೈಟ್ನಲ್ಲಿ ಬಹಿರಂಗಪಡಿಸಿದೆ.
Comments are closed.