
ತಿರುವನಂತಪುರಂ: ಹೆಣ್ಣು ಹುಟ್ಟಿದೆ ಎಂದು ಪತ್ನಿ, ಮಗುವನ್ನು ತೊರೆದ ಸುದ್ದಿಯೊಂದು ಪ್ರಕಟವಾದ ಬೆನ್ನಲ್ಲೇ ಇಲ್ಲೊಂದು ಸಂತೋಷದ ಸುದ್ದಿಯಿದೆ. ಹೆಣ್ಣು ಹೆಣ್ಣೆಂದು ಬೀಳುಗಳೆವವರಿಗೆ, ಹುಟ್ಟುವ ಮಗು ಹೆಣ್ಣಾಗಲೆಂದು ಬೇಡುವಂತೆ ಮಾಡುತ್ತಿದ್ದಾರೆ ಪಾಲಿಕೆ ಸದಸ್ಯರೊಬ್ಬರು.
ಈ ನಗರಪಾಲಿಕೆ ವ್ಯಾಪ್ತಿಯಡಿಯಲ್ಲಿ ಹೆಣ್ಣಾದರೆ ತಕ್ಷಣವೇ ಪಾಲಿಕೆ ಸದಸ್ಯ ಅಬ್ದುಲ್ ರಹೀಮ್ಗೆ ಕರೆ ಮಾಡಲಾಗುತ್ತದೆ. ಏಕೆ ಗೊತ್ತಾ? ಇವರು ಪಾಲಿಕೆ ಸದಸ್ಯರಾಗಿ ಎರಡು ವರ್ಷಗಳ ಹಿಂದೆ ಚುನಾಯಿರಾದಗಿಂದಲೂ ಹೆಣ್ಣು ಹೆತ್ತವರಿಗೆ ಚಿನ್ನದ ನಾಣ್ಯವನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ. ಇದುವರೆಗೆ 16 ತಾಯಿಯರು ಇವರು ನೀಡುವ ಉಡುಗೊರೆಗೆ ಪಾತ್ರರಾಗಿದ್ದು, ಹೆಣ್ಣು ಭ್ರೂಣ ಹತ್ಯೆ ತಡೆಗೆ ರಹೀಮ್ ತೆಗೆದುಕೊಂಡ ಕ್ರಮಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕೇರಳದ ಮಲ್ಲಪ್ಪರಮ್ನ ಪೂರ್ವ ವಿಲ್ಲೂರ್ನ ಕೊಟ್ಟಕ್ಕಲ್ ನಗರ ಪಾಲಿಕೆ ಸದಸ್ಯರಾಗಿರುವ ರಹೀಮ್ಗೆ ಹೆಣ್ಣು ಮಕ್ಕಳೆಂದರೆ ಇಷ್ಟವಂತೆ. ಬರೀ ಹೆಣ್ಣು ಮಕ್ಕಳೆಂದು ಬೇಸರ ಪಡೋ ಮಂದಿಯನ್ನು ನೋಡಿದಾಗ ರಹೀಮ್ಗೆ ಸಂಕಟವಾಗುತ್ತಿತ್ತಂತೆ. ಹೆಣ್ಣು ಮಕ್ಕಳು ಜನಿಸುವುದು ಮಾತ್ರ ಅದೃಷ್ಟ ಇರವವರಿಗೆ ಎಂದು ನಂಬಿದ ಇವರು, ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಹೆಣ್ಣು ಮಗು ಜನಿಸಿದರೆ, ಚಿನ್ನದ ನಾಣ್ಯ ನೀಡೋ ಪದ್ಧತಿಯನ್ನು ಆರಂಭಿಸಿದರಂತೆ.
‘ಕೆಲವರಂತೂ ಆಸ್ಪತ್ರೆಯಿಂದಲೇ ಹೆಣ್ಣು ಮಗು ಹುಟ್ಟಿದ ಸುದ್ದಿ ಹೇಳಿ, ಸಂತೋಷ ಹಂಚಿ ಕೊಳ್ಳುತ್ತಾರೆ,’ ಎಂದು ಹೇಳುವ ರಹೀಮ್, ಚುನಾವಣೆಗೆ ನಾಮಪತ್ರ ಸಲ್ಲಿಸಿದಾಗಲೇ ಜನಿಸಿದ ಹೆಣ್ಣು ಮಗುವಿಗೆ ಚಿನ್ನದ ನಾಣ್ಯ ಕೊಟ್ಟಿದ್ದು ಮೊದಲಂತೆ. ಇದೀಗ ಆ ಮಗುವಿಗೆ ತಂಗಿಯೂ ಹುಟ್ಟಿದ್ದಾಳೆ, ಎನ್ನುತ್ತಾರೆ ನಾನಿ ಎಂದೇ ಕರೆಯಲ್ಪಡುವ ರಹೀಮ್.
ಇವರಿಗೂ ನಾಲ್ಕನೇ ತರಗತಿ ಓದುವ ಮಗಳಿದ್ದು, ಹೆಣ್ಣು ಹೆತ್ತ ಪತ್ನಿಗೂ ಚಿನ್ನದ ನಾಣ್ಯ ನೀಡಿದ್ದೀರಾ ಎಂದು ಕೇಳಿದರೆ, ‘ಮನೆಗೆ ಹೆಣ್ಣು ಮಗು ಬಂದ ಸಂತೋಷಕ್ಕೆ ಸರ್ವಸ್ವವನ್ನೂ ಆಕೆಗೆ ನೀಡಿದ್ದೇನೆ,’ ಎನ್ನುತ್ತಾರೆ.
Comments are closed.