ರಾಷ್ಟ್ರೀಯ

ಬಿಜೆಪಿ ಒನ್‌ ಮ್ಯಾನ್‌ ಶೋ, ಟು ಮೆನ್‌ ಆರ್ಮಿ ಆಗಬಾರದು: ಶತ್ರುಘ್ನ ಸಿನ್ಹಾ

Pinterest LinkedIn Tumblr


ಪಟನಾ: ಬಿಜೆಪಿಯಲ್ಲಿ ಒನ್‌ ಮ್ಯಾನ್‌ ಶೋ ಅಥವಾ ಟು ಮೆನ್‌ ಆರ್ಮಿ ಸಂಪ್ರದಾಯ ಇರಬಾರದು. ಇದರಿಂದ ಜನತೆಯ ಭರವಸೆಗಳನ್ನು ಈಡೇರಿಸಲು, ವಿಶ್ವಾಸವನ್ನು ಉಳಿಸಿಕೊಳ್ಳಲು ಆಗುವುದಿಲ್ಲ ಎಂದು ಬಾಲಿವುಡ್‌ ನಟ, ಬಿಜೆಪಿ ಮುಖಂಡ ಶತ್ರುಘ್ನ ಸಿನ್ಹಾ ತಿಳಿಸಿದ್ದಾರೆ.

ಖಾಸಗಿ ಸುದ್ದಿಸಂಸ್ಥೆಗೆ ವಿಶೇಷ ಸಂದರ್ಶನದಲ್ಲಿ ಶಾಟ್‌ಗನ್‌ ಎಂದೇ ಹೆಸರುವಾಸಿಯಾಗಿರುವ ಶತ್ರುಘ್ನ ಸಿನ್ಹಾ ಮನದಾಳದ ಮಾತುಗಳನ್ನು ಹೇಳಿದ್ದಾರೆ.

ಇದು ಪರೋಕ್ಷವಾಗಿ ನರೇಂದ್ರ ಮೋದಿ, ಅಮಿತ್‌ ಶಾ ಅವರ ಶತ್ರುಘ್ನ ಸಿನ್ಹಾ ವಾಗ್ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಯುವಕರು, ರೈತರು ಹಾಗೂ ಸಣ್ಣಪುಟ್ಟ ಉದ್ಯಮಿಗಳು ಬಿಜೆಪಿಯ ಸದ್ಯದ ನೀತಿಯನ್ನು ಒಪ್ಪಿಕೊಳ್ಳುತ್ತಿಲ್ಲ. ಇದರ ಬಗ್ಗೆ ಗಮನಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದೇ ಪರಿಸ್ಥಿತಿ ಮುಂದುವರಿದರೆ ಗುಜರಾತ್‌ ಮತ್ತು ಹಿಮಾಚಲಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೆ ಸಾಕಷ್ಟು ಪೈಪೋಟಿ ಎದುರಾಗಲಿದೆ. ಪ್ರತಿಪಕ್ಷಗಳನ್ನು ಲಘುವಾಗಿ ಪರಿಗಣಿಸಬಾರದು. ಕೆಲವು ನಾಯಕರು ಈ ರೀತಿಯ ಧೋರಣೆ ಹೊಂದಿದ್ದಾರೆ. ಇದು ಬದಲಾಗಬೇಕು ಎಂದು ಸಿನ್ಹಾ ಹೇಳಿದ್ದಾರೆ.

ನಾನು ಬಿಜೆಪಿ ಸೇರಿರುವುದು ಪಕ್ಷವನ್ನು ಬಿಡುವುದಕ್ಕಲ್ಲ. ಕೆಲವು ಭಿನ್ನಾಭಿಪ್ರಾಯಗಳು ಇರುತ್ತವೆ. ಇದು ಸರ್ವೇ ಸಾಮಾನ್ಯ. ಹಾಗೆಂದು ಪಕ್ಷ ಬಿಟ್ಟು ಹೋಗುವವ ನಾನಲ್ಲ ಎಂದು ಹೇಳುವ ಮೂಲಕ ಪಕ್ಷ ಬಿಟ್ಟು ಹೋಗುತ್ತಾರೆ ಎಂಬ ವರದಿಗಳನ್ನು ಅಲ್ಲಗಳೆದಿದ್ದಾರೆ.

ಪಕ್ಷ ಎಂದಿಗೂ ಒಗ್ಗೂಡಿರಬೇಕು. ಹಿರಿಯ ನಾಯಕರ ಆಶೀರ್ವಾದವನ್ನು ಹೊಂದಿರಬೇಕು. ಲಾಲ್‌ ಕೃಷ್ಣ ಆಡ್ವಾಣಿ, ಮುರಳಿ ಮನೋಹರ್‌ ಜೋಷಿ, ಅರುಣ್‌ ಶೌರಿ, ಯಶವಂತ್‌ ಸಿನ್ಹಾ ಅವರ ಮಾರ್ಗದರ್ಶನ ಸಹ ಅಗತ್ಯ ಎಂದು ಸಿನ್ಹಾ ವಿವರಿಸಿದ್ದಾರೆ.

ನೋಟು ಬ್ಯಾನ್‌, ಜಿಎಸ್‌ಟಿಯಿಂದ ಜನ ಸಾಮಾನ್ಯರಿಗೆ ತೊಂದರೆಯಾಗಿದೆ ಎಂದು ಶತ್ರುಘ್ನ ಸಿನ್ಹಾ ಪರೋಕ್ಷವಾಗಿ ಹೇಳಿದ್ದಾರೆ.

ಗುಜರಾತ್‌, ರಾಜಸ್ಥಾನ ಹಾಗೂ ಇತರೆ ರಾಜ್ಯಗಳಲ್ಲಿನ ಬಿಜೆಪಿ ಆಡಳಿತದ ಬಗ್ಗೆಯೂ ಶಾಟ್‌ಗನ್‌ ಸಿನ್ಹಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Comments are closed.