
ಹರ್ಷಿಕಾ ಪೂಣಾಚ್ಚ ಮತ್ತು ಯಶಸ್ ಸೂರ್ಯ ಇಬ್ಬರೂ ಎಂ.ಎಲ್. ಪ್ರಸನ್ನ ನಿರ್ದೇಶನದ “ಚಿಟ್ಟೆ’ ಎಂಬ ಚಿತ್ರದಲ್ಲಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಚಿತ್ರ ಮುಕ್ತಾಯದ ಹಂತಕ್ಕೆ ತಲುಪಿದೆ. ಡಿಸೆಂಬರ್ ಕೊನೆಗೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯೂ ಇದೆ. ವಿಶೇಷೆಂದರೆ, ಈ ಚಿತ್ರಕ್ಕಾಗಿ ಹರ್ಷಿಕಾ ಬಾಡಿ ಪೇಂಟ್ ಮಾಡಿಸಿಕೊಂಡಿರುವುದು.
ಚಿತ್ರದಲ್ಲಿನ ಒಂದು ದೃಶ್ಯಕ್ಕಾಗಿ ಹರ್ಷಿಕಾ ತಮ್ಮ ಬೆನ್ನ ಮೇಲೆ ದೊಡ್ಡ ಚಿಟ್ಟೆಯೊಂದನ್ನು ಬರೆಸಿಕೊಂಡಿದ್ದು, ಈ ಚಿಟ್ಟೆ ಬರೆಯುವುದಕ್ಕೆ ಸುಮಾರು ನಾಲ್ಕು ಗಂಟೆ ತೆಗೆದುಕೊಳ್ಳಲಾಗಿದೆಯಂತೆ. ಹರ್ಷಿಕಾ ಬೆನ್ನ ಮೇಲೆ ಚಿಟ್ಟೆ ಬರೆದಿರುವುದು ಚಂದನಾ ಎಂಬ ಕಾಸ್ಟೂಮ್ ಡಿಸೈನರ್. ಪೇಂಟಿಂಗ್ ಸಹ ಕಲಿತಿರುವ ಅವರು, ಇದಕ್ಕೂ ಮುನ್ನ ಯಾವತ್ತೂ ಬಾಡಿ ಪೇಂಟ್ ಮಾಡಿರಲಿಲ್ಲ.
ಚಿತ್ರದ ಒಂದು ಸನ್ನಿವೇಶಕ್ಕೆ ಹರ್ಷಿಕಾ ಮೇಲೆ ಚಿಟ್ಟೆ ಬರೆಯುವ ಅವಕಾಶ ಸಿಕ್ಕಿದ್ದು, ಸುಮಾರು ನಾಲ್ಕು ಗಂಟೆಗಳ ಕಾಲ ಹರ್ಷಿಕಾ ಬೆನ್ನ ಮೇಲೆ ಚಿತ್ತಾರ ಬರೆದಿದ್ದಾರೆ. ಅದನ್ನು ಚಿತ್ರದಲ್ಲಿ ನಾಯಕ ಪೇಂಟ್ ಮಾಡಿದ ಹಾಗೆ ತೋರಿಸಲಾಗುತ್ತದೆ. ಏಕೆಂದರೆ, ಇಲ್ಲಿ ನಾಯಕ ಒಬ್ಬ ಪೇಂಟರ್ ಅಂತೆ. ಚಂದನಾ ಬಿಡಿಸಿದ ಚಿತ್ತಾರವನ್ನು, ನಾಯಕ ಬಿಡಿಸಿದ ಹಾಗೆ ಚಿತ್ರದಲ್ಲಿ ತೋರಿಸಲಾಗುತ್ತದೆ.
“ಚಿಟ್ಟೆ’ ಚಿತ್ರಕ್ಕೆ ಪ್ರಸನ್ನ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ಬರೆದಿದ್ದಾರೆ. ಇನ್ನು ಸಂಗೀತ ನಿರ್ದೇಶನ ಸಹ ಅವರದ್ದೇ. ನಿರ್ಮಾಪಕರೂ ಅವರೇ. ಚಿತ್ರಕ್ಕೆ ವಿಶ್ವಜಿತ್ ರಾವ್ ಅವರ ಛಾಯಾಗ್ರಹಣವಿದ್ದರೆ, ಕೆಜೆಟನ್ ಡಯಾಸ್ ಅವರ ಹಿನ್ನೆಲೆ ಸಂಗೀತವಿದೆ. ಚಿತ್ರದಲ್ಲಿ ಯಶಸ್, ಹರ್ಷಿಕಾ, ದೀಪಿಕಾ, “ಜಟ್ಟ’ ಗಿರಿರಾಜ್, ನಾಗೇಶ್ ಕಾರ್ತಿಕ್ ಮುಂತಾದವರು ನಟಿಸಿದ್ದಾರೆ.
-ಉದಯವಾಣಿ
Comments are closed.