ಕರಾವಳಿ

ಬೆಳೆ ಸಮೀಕ್ಷೆಗೂ ಬಂತು ಮೊಬೈಲ್ ಆಪ್!

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಜಾರ್ಕಳ ಕುಕ್ಕೂಂದೂರಿನ ರೈತರ ಜಮೀನುಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಎಂ.ಮಹೇಶ್ವರ ರಾವ್ ಅವರು ಭೇಟಿ ನೀಡಿ ವಿನೂತನ ಮೊಬೈಲ್ ಆಪ್ ಮುಖಾಂತರ ಬೆಳೆ ದಾಖಲಿಸುವ ಸಮೀಕ್ಷೆ ನಡೆಸಿದರು.

ಮೊಬೈಲ್ ಆಪ್ ದಾಖಲಿಸಿದಾಗ ನೈಜತೆ ಹಾಗೂ ಸೂಕ್ತ ದಾಖಲೆ ಹೊಂದಾಣಿಕೆಗಾಗಿ ಅತೀ ಅವಶ್ಯವಾಗಿರುತ್ತದೆ. ಹೀಗಾಗಿ ಸರ್ಕಾರ ಈ ಒಂದು ಯೋಜನೆ ಅನುಷ್ಠಾನಗೊಳಿಸಲಾಗಿದೆ. ರೈತರು ಸಮೀಕ್ಷೆ ಸಿಬ್ಬಂದಿಗೆ ಬೆಳೆ ದಾಖಲಿಸಲು ಸಹಕರಿಸಬೇಕೆಂದು ರೈತರಲ್ಲಿ ಮನವಿ ಮಾಡಿದರು. ಮೊಬೈಲ್ ಆಪ್ ಮೂಲಕ ಬೆಳಗಳ ದಾಖಲಿಸುವುದರಿಂದ ಪ್ರತಿಯೊಬ್ಬ ರೈತನೂ ಬೆಳೆಯಲಾದ ಬೆಳೆಗಳ ವಿವರ ಕ್ಷೇತ್ರದ ಜತೆಗೆ ನೀರಾವರಿ ಸೇರಿದಂತೆ ಸಂಪೂರ್ಣ ವರದಿ ಸಂಗ್ರಹವಾಗುತ್ತಿದೆ. ಈಗಾಗಲೇ ಪ್ರತಿಯೊಂದು ಕಡೆಗೂ ಜಮೀನುಗಳಲ್ಲಿ ಬೆಳೆದ ಬೆಳೆಗಳ ಕುರಿತು ದಾಖಲಿಸುವ ಸಮೀಕ್ಷೆ ಕಾರ್ಯ ಚುರುಕುಗೊಂಡಿದೆ ಎಂದರು. ವಿವಿಧ ಬೆಳೆಗಳಿಗೆ ಪ್ರಾಕೃತಿಕ ವಿಕೋಪದಂತಹ ಸಂದರ್ಭದಲ್ಲಿ ಫಸಲು ನಷ್ಟದ ನೈಜತೆಯನ್ನಾಧಿರಿಸಿ ರೈತಾಪಿವರ್ಗದ ಜನರಿಗೆ ಸಕಾಲಿಕ ಮತ್ತು ನ್ಯಾಯಯುತ ಪರಿಹಾರ ಪಾವತಿಗಾಗಿ ಬಿತ್ತನೆಯಾದ ಕ್ಷೇತ್ರ ಏಕರೂಪ ಪದ್ದತಿ ಜಾರಿಗೊಳಿಸಲು ಮೊಬೈಲ್ ಆಪ್ ಮುಖಾಂತರ ಸಮೀಕ್ಷೆ ಕೈಗೊಳ್ಳಲು ಸರಕಾರ ನಿರ್ಧರಿಸಿದೆ ಎಂದರು.

ಈ ಸಂದರ್ಭದಲ್ಲಿ. ಕಾರ್ಕಳ ತಹಸೀಲ್ದಾರ್ ಸಿ ಮಹದೇವಯ್ಯ, ಜಂಟಿ ಕೃಷಿ ನಿರ್ದೇಶಕರಾದ ಅಂತೋನಿ ಮರಿಯಾ ಇಮ್ಯಾನುವೆಲ್, ಕೃಷಿ ಇಲಾಖೆಯ ಉಪನಿರ್ದೇಶಕರಾದ ಚಂದ್ರಶೇಖರ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಬೆಳೆ ಸಮೀಕ್ಷೆ ಯೋಜನೆಯಡಿ ಕೃಷಿ ಜಮೀನಿನಲ್ಲಿ ಬಿತ್ತನೆಯಾದ ಬೆಳೆ ಮತ್ತು ಕ್ಷೇತ್ರ ಜೊತೆಗೆ ಬಳಸಲಾದ ನೀರಾವರಿ ಪದ್ಧತಿ ವಿವರಗಳ ಸಂಗ್ರಹಣೆ ಕುರಿತು ಸ್ಪಷ್ಟವಾದ ಮತ್ತು ಏಕರೂಪದ ಪದ್ಧತಿ ಜಾರಿಗೊಳಿಸಲು ಮೊಬೈಲ್ ಆಪ್ ಮೂಲಕ ಬೆಳೆಗಳ ದಾಖಲಿಸಲು ಉದ್ದೇಶಿಸಿದೆ.

ಬೆಳೆ ಸಮೀಕ್ಷೆ ಯೋಜನೆ ಪ್ರಮುಖ ಅಂಶ ಈ ರೀತಿಯಾಗಿದ್ದು, ಜಮೀನು ಕ್ಷೇತ್ರವನ್ನು ವಿವಿಧ ಬೆಳೆ ಸ್ವರೂಪಗಳಿಗೆ ನವೀಕರಿಸುವುದಕ್ಕಾಗಿ, ವಿವಿಧ ಬೆಳೆಗಳಿಗೆ ಸರಿಯಾದ ಮೊತ್ತದ ಸಹಾಯಧನದ ಅಂದಾಜು ಪ್ರಕ್ರಿಯೆಗೆ , ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಫಸಲು ನಷ್ಟದ ನೈಜ ಅಂದಾಜು ಮತ್ತು ರೈತಾಪಿ ವರ್ಗದವರಿಗೆ ಸಕಾಲಿಕ ಮತ್ತು ನ್ಯಾಯಯುತ ಪರಿಹಾರ ಪಾವತಿಗಾಗಿ ಮತ್ತು ಪಹಣಿ ಪತ್ರಿಕೆ ಮತ್ತು ವಿಮೆ ದಾಖಲೆಗಳಲ್ಲಿ ಪರಸ್ಪರ ನೈಜ ಹಾಗೂ ಅದೇ ದಾಖಲೆ, ಮಾಹಿತಿಗಳ ನಿರೀಕ್ಷೆ ಇದಾಗಿದೆ.

ಜಿಲ್ಲೆಯಲ್ಲಿ ಒಟ್ಟು 9,91,895 ಪ್ಲಾಟ್ಸ್ (ರೈತರ ಜಮೀನು) ಇದ್ದು, ಇಲ್ಲಿಯವರೆಗೆ 66,152 ಪ್ಲಾಟ್ಸ್‌ನ ಸಮೀಕ್ಷೆ ಮುಗಿಸಲಾಗಿದೆ. ಇನ್ನು ಹೆಚ್ಚಿನ ಪ್ರಮಾಣದಲ್ಲಿ ಎಲ್ಲಾ ರೈತರು ಆಸಕ್ತಿ ವಹಿಸಿ ಬೆಳೆ ಸಮೀಕ್ಷೆ ಸಮಯದಲ್ಲಿ ಹಾಜರಾಗಿದ್ದು, ತಮ್ಮ ಆದಾರದ ಸಂಖ್ಯೆ ಮತ್ತು ದೂರವಾಣಿ ಸಂಖ್ಯೆಯನ್ನು ಸಂಬಂಧಿಸಿದ ಸಮೀಕ್ಷೆ ಸಿಬ್ಬಂದಿಗಳಿಗೆ ಒದಗಿಸಿ ಬೆಳೆ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಲು ಸಹಕರಿಸಿ ಜಿಲ್ಲೆಯ ಸಮಸ್ತ ರೈತರು ಈ ಯೋಜನೆ ಸದುಪಯೋಗ ಪಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಎಂ.ಮಹೇಶ್ವರ ರಾವ್ ತಿಳಿಸಿದ್ದಾರೆ.

Comments are closed.