
ಚೆನ್ನೈ: ಈಶಾನ್ಯ ಮುಂಗಾರು ಚುರುಕುಗೊಂಡ ಹಿನ್ನೆಲೆಯಲ್ಲಿ ಚೆನ್ನೈ ಸೇರಿದಂತೆ ತಮಿಳುನಾಡಿನ ವಿವಿಧ ಭಾಗಗಳಲ್ಲಿ ಸೋಮವಾರ ಭಾರಿ ಮಳೆಯಾಗಿದ್ದು, ಮಳೆ ಸಂಬಂಧಿತ ಅವಘಡದಲ್ಲಿ ಒಬ್ಬರು ಬಲಿಯಾಗಿದ್ದಾರೆ.
ಚೆನ್ನೈನಲ್ಲಿ ಭಾರಿ ಮಳೆಯಿಂದಾಗಿ ಜನಜೀವನ ಭಾಗಶಃ ಅಸ್ತವ್ಯಸ್ತಗೊಂಡಿತು. ಮಳೆಯಲ್ಲಿ ಸಿಲುಕಿಗೊಂಡ ಜನತೆ ಸಕಾಲಕ್ಕೆ ಮನೆ, ಕಚೇರಿ ತಲುಪದೇ ಪರದಾಡಿದರು.ಟ್ರಾಫಿಕ್ ಜಾಮ್ ಸಾಮನ್ಯವಾಗಿತ್ತು.
ಚೆನ್ನೈ, ನಾಗಪಟ್ಟಣಂ, ರಾಮನಾಥಪುರಂ, ಕಾಂಚಿಪುರಂ, ತಿರುವಳ್ಳುವರ್, ಕಡಲೂರು ಸೇರಿದಂತೆ ಹಲವು ಕಡೆ ವರುಣನ ಆರ್ಭಟವಿತ್ತು. ಮುಂದಿನ 24 ಗಂಟೆಗಳಲ್ಲಿ ತಮಿಳುನಾಡಿನ ಕರಾವಳಿ ತೀರದಲ್ಲಿ ಭಾರಿ ಮಳೆ ಹಾಗೂ ಒಳನಾಡಿನಲ್ಲಿ ಸಾಧಾರಣದಿಂದ ಕೂಡಿದ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪರಿಸ್ಥಿತಿ ನಿಭಾಯಿಸಲು ಸ್ಥಳೀಯ ಆಡಳಿತಗಳು ಸನ್ನದ್ಧಗೊಂಡಿವೆ.
ಮುನ್ನೆಚ್ಚರಿಕೆ ಕ್ರಮವಾಗಿ ಸೋಮವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ತಾಂಜಾವೂರು ಜಿಲ್ಲೆಯ ತಿನ್ನೈಯೂರುವಿನಲ್ಲಿ 38 ವರ್ಷದ ವ್ಯಕ್ತಿಯೊಬ್ಬ ಮಳೆ ಸಂಬಂಧಿ ಅನಾಹುತದಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ.
Comments are closed.