
ಕುಂದಾಪುರ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಇತಿಹಾಸದಲ್ಲೇ ಮೊದಲ ಬಾರಿಗೆ ಕಾಣಿಕೆ ಹುಂಡಿಯಲ್ಲಿ 1.10 ಕೋಟಿ ರೂ.ಗೂ ಮಿಕ್ಕಿ ಹಣ ಸಂಗ್ರಹವಾಗಿದೆ. ಅ. 24ರಂದು ಕಾಣಿಕೆ ಹಣ ಎಣಿಕೆ ಮಾಡಿದ್ದು, ಈ ವೇಳೆ 1,10,66,278 ಕೋ. ರೂ. ದೊರೆತಿದೆ. ಈ ಮೂಲಕ ರಾಜ್ಯದ ಶ್ರೀಮಂತ ದೇವಸ್ಥಾನಗಳ ಪೈಕಿ ಒಂದಾದ ಕೊಲ್ಲೂರು ದೇವಳದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ.
ಕೊಲ್ಲೂರು ಮೂಕಾಂಬಿಕಾ ದೇಗುಲದಲ್ಲಿ ಪ್ರತಿ ತಿಂಗಳಿಗೊಮ್ಮೆ ಹುಂಡಿಯ ಹಣವನ್ನು ಎಣಿಸಲಾಗುತ್ತದೆ. ಸರಿಸುಮಾರು 70ರಿಂದ 80 ಲಕ್ಷ ರೂ. ವರೆಗೆ ಸಂಗ್ರಹವಾಗುತ್ತದೆ. ಒಂದೂವರೆ ವರ್ಷದ ಹಿಂದೆ ಗರಿಷ್ಠ 1.6 ಕೋಟಿ ರೂ. ಸಂಗ್ರಹವಾಗಿತ್ತು. ಈ ತಿಂಗಳಿನಲ್ಲಿ ಆಯುಧ ಪೂಜೆ, ವಿಜಯ ದಶಮಿ, ದೀಪಾವಳಿ ಹಬ್ಬಗಳಲ್ಲದೆ ಹೆಚ್ಚಿನ ಸಂಖ್ಯೆಯ ಸರಕಾರಿ ರಜೆಗಳು, ಶಾಲಾ ಕಾಲೇಜುಗಳಿಗೆ ರಜೆಯೂ ಇದ್ದುದರಿಂದ ಯಾತ್ರಿಗಳ ಸಂಖ್ಯೆಯೂ ಹೆಚ್ಚಾಗಿತ್ತು.
ಚಿನ್ನ, ಬೆಳ್ಳಿ, ಕರೆನ್ಸಿ…!
1 ಕೋಟಿ ರೂ. ಮಿಕ್ಕಿ ನಗದಿನೊಂದಿಗೆ ಹುಂಡಿಯಲ್ಲಿ 870 ಗ್ರಾಂ ಚಿನ್ನ ಮತ್ತು 3.2 ಕೆ.ಜಿ. ಬೆಳ್ಳಿ ದೊರೆತಿದೆ. ಜತೆಗೆ ವಿವಿಧ ದೇಶಗಳ ಸುಮಾರು 1 ಲಕ್ಷ ರೂ.ಗಳಷ್ಟು ಮೊತ್ತದ ಕರೆನ್ಸಿ ಸಿಕ್ಕಿದೆ ಎನ್ನಲಾಗಿದೆ.
ಮೂಕಾಂಬಿಕಾ ದೇಗುಲಕ್ಕೆ ದಾಖಲೆ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ಕಾಣಿಕೆ ಸಮರ್ಪಿಸಿದ್ದಾರೆ. ಹುಂಡಿಯಲ್ಲಿ ಸಂಗ್ರಹವಾದ ವಿದೇಶಿ ಕರೆನ್ಸಿಗಳಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ಅಮೆರಿಕ ಹಾಗೂ ಅರಬ್ ರಾಷ್ಟ್ರಗಳ ಕರೆನ್ಸಿ ದೊರೆತಿದೆ. ದೇವಳಕ್ಕೆ ಬೇಟಿ ನೀಡುವ ಭಕ್ತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಸೇವೆಗಳು ಹೆಚ್ಚಾಗಿದೆ ಎಂದು ಅರ್ಚಕರು ತಿಳಿಸಿದ್ದಾರೆ.
– ಹರೀಶ್ ಕುಮಾರ್ ಶೆಟ್ಟಿ(ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ )
Comments are closed.