
ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಇತ್ತೀಚೆಗೆ ಹಿಂದಿ ಹೇರಿಕೆ ಬಗ್ಗೆ ಆದ ರಾದ್ಧಾಂತದ ಬಗ್ಗೆ ಗೊತ್ತೇ ಇದೆ. ಕಳೆದ ಕೆಲವು ವರ್ಷಗಳಿಂದ ಹಿಂದಿ ಹೇರಿಕೆ, ಪರಭಾಷಾ ವ್ಯಾಮೋಹದ ಬಗ್ಗೆ ಸಾಕಷ್ಟು ಹೋರಾಟಗಳು ನಮ್ಮ ರಾಜ್ಯದಾದ್ಯಂತ ನಡೆಯುತ್ತಲೇ ಬಂದಿವೆ. ಆದರೂ ಕನ್ನಡ ಮಾತನಾಡಲು ಯಾಕೋ ಏನೋ ಸಂಕೋಚ, ಹಿಂಜರಿಕೆಯನ್ನು ಬಹಳಷ್ಟು ಮಂದಿಯಲ್ಲಿ ಕಾಣಬಹುದು. ಹಲವಾರು ವರ್ಷಗಳಿಂದ ಕರ್ನಾಟಕದಲ್ಲಿದ್ದರೂ ಒಂದೇ ಒಂದು ಅಕ್ಷರ ಕನ್ನಡ ಕಲಿಯದವರೂ ಇದ್ದಾರೆ. ಆದರೆ ಇಲ್ಲೊಬ್ಬ ಕ್ಯಾಬ್ ಡ್ರೈವರ್ ಮಾತ್ರ ಸದ್ದಿಲ್ಲದಂತೆ ಕನ್ನಡ ಸೇವೆ ಮಾಡುತ್ತಿದ್ದಾರೆ.
ಖಾಸಗಿ ಆ್ಯಪ್ ಆಧಾರಿತ ಕ್ಯಾಬ್ ಚಾಲಕರಾಗಿರುವ ಮಹೇಂದ್ರ ಎಂ ಎಂಬುವವರ ಕನ್ನಡ ಪ್ರೀತಿ ಭಿನ್ನ. ಕನ್ನಡ ಗೊತ್ತಿಲ್ಲದವರಿಗೆ ತಮ್ಮದೇ ಶೈಲಿಯಲ್ಲಿ ಕನ್ನಡ ಮಾತನಾಡಲು ಪ್ರೋತ್ಸಾಹಿಸುತ್ತಿದ್ದಾರೆ. ಇವರದು ಮೂಲತಃ ದೇವನಹಳ್ಳಿ ಸಮೀಪದ ಒಂದು ಗ್ರಾಮ. ಅವರ ಕ್ಯಾಬ್ನಲ್ಲಿ ಪ್ರಯಾಣಿಸುವವರಿಗೆ ವಿಶೇಷ ರಿಯಾಯಿತಿ ಪ್ರಕಟಿಸಿದ್ದಾರೆ.
ತಮ್ಮ ಕ್ಯಾಬ್ನಲ್ಲಿ ನೋಟಿಸ್ ಒಂದನ್ನು ಅಂಟಿಸಿದ್ದಾರೆ ಮಹೇಂದ್ರ. ಕನ್ನಡ ಬಾರದವರು ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸಿದರೆ ಅವರಿಗೆ ಶೇ. 5ರಷ್ಟು ರಿಯಾಯಿತಿ ನೀಡುವುದಾಗಿ ಪ್ರಕಟಿಸಿದ್ದಾರೆ. ಒಂದು ವೇಳೆ ಅವರ ಕ್ಯಾಬ್ನಲ್ಲಿ ಕನ್ನಡ ಹಾಡು ಕೇಳಿದರೆ ಹೆಚ್ಚುವರಿಯಾಗಿ ಶೇ.5ರಷ್ಟು ಡಿಸ್ಕೌಂಟ್ ಸಿಗುತ್ತದೆ. ಈ ಮೂಲಕ ಗ್ರಾಹಕರು ಒಟ್ಟು ಶೇ.10ರಷ್ಟು ರಿಯಾಯಿತಿ ಪಡೆಯಬಹುದು. ಜತೆಗೆ ಕನ್ನಡವನ್ನೂ ಕಲಿಯಬಹುದು.
‘ನನಗೆ ಗೊತ್ತಿರುವಂತೆ ಬೆಂಗಳೂರಿನಲ್ಲಿ ಬಹುತೇಕರು ಕನ್ನಡದಲ್ಲಿ ಮಾತನಾಡಲ್ಲ. ಕನ್ನಡ ಬಿಟ್ಟು ಬೇರೆ ಭಾಷೆಯಲ್ಲೇ ಮಾತನಾಡಲು ಬಹಳಷ್ಟು ಮಂದಿ ಇಷ್ಟಪಡುತ್ತಾರೆ. ಇದರಿಂದ ನನಗೆ ತುಂಬಾ ಬೇಸರವಾಗುತ್ತಿತ್ತು. ನಾನು ಅವರಿಗೆ ಕನ್ನಡದಲ್ಲಿ ಮಾತನಾಡಿ ಎಂದು ಬಲವಂತ ಮಾಡುವಂತಿರಲಿಲ್ಲ. ಆ ರೀತಿ ಮಾಡಿದರೆ ನನ್ನ ವಿರುದ್ಧ ತಿರುಗಿ ಬೀಳುತ್ತಿದ್ದರು. ನನ್ನ ಜತೆ ಅಸಭ್ಯವಾಗಿ ನಡೆದುಕೊಂಡ, ಕನ್ನಡದಲ್ಲಿ ಮಾತನಾಡಲು ಫೋರ್ಸ್ ಮಾಡಿದ ಎಂದು ದೂರು ನೀಡುತ್ತಿದ್ದರು. ಕನ್ನಡದಲ್ಲಿ ಮಾತನಾಡಿ ಎಂದು ವಿನಂತಿಸಿಕೊಂಡರೂ ಚಾಲಕರ ವಿರುದ್ಧ ದೂರು ನೀಡುತ್ತಿದ್ದರು’ ಎನ್ನುತ್ತಾರೆ ಮಹೇಂದ್ರ.
‘ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಪ್ರೀತಿಸಿ ಎಂದು ಬಲವಂತ ಮಾಡುವಂತಿರಲಿಲ್ಲ. ಹಾಗಾಗಿ ಈ ಭಿನ್ನ ಐಡಿಯಾ ಮಾಡಬೇಕಾಯಿತು. ಕನ್ನಡದಲ್ಲಿ ಮಾತನಾಡುವವರಿಗೆ ರಿಯಾಯಿತಿ ನೀಡುವುದಾಗಿ ಪ್ರಕಟಿಸಿದೆ. ನನಗೆ ಅಚ್ಚರಿಯಾಗುವಂತೆ ಪ್ರಯಾಣಿಕರು ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸುತ್ತಿದ್ದರು. ನನ್ನ ಐಡಿಯಾ ಸೂಪರ್ ಹಿಟ್ ಆಯಿತು. ಕೇವಲ ಉತ್ತರ ಭಾರತೀಯರಷ್ಟೇ ಅಲ್ಲದೆ, ವಿದೇಶಿಯರು ಸಹ ನನ್ನ ನೋಟೀಸ್ ಬೋರ್ಡ್ಗೆ ಆಕರ್ಷಿತರಾದರು’ ಎನ್ನುತ್ತಾರೆ ಮಹೇಂದ್ರ.
ಬಹಳಷ್ಟು ಮಂದಿ ಪ್ರಯಾಣಿಕರು ಆನ್ಲೈನ್ನಲ್ಲೇ ಪೇಮೆಂಟ್ ಮಾಡುತ್ತಾರೆ. ಹಾಗಾಗಿ ಅವರಿಗೆ ಶೇ.10ರಷ್ಟು ರಿಯಾಯಿತಿ ಹಣವನ್ನು ನನ್ನ ಜೇಬಿನಿಂದಲೇ ಕೊಡುತ್ತೇನೆ. ಈ ರಿಯಾಯಿತಿಯಿಂದ ಇನ್ನೂ ಜಾಸ್ತಿ ಕನ್ನಡ ಕಲಿಯಬೇಕು ಎಂದು ಬಹಳಷ್ಟು ಮಂದಿ ಅವರ ಬಳಿ ಹೇಳುತ್ತಾರಂತೆ. ಹಾಗಾಗಿ ಮಹೇಂದ್ರ ಅವರಿಗೆ ತುಂಬಾ ಖುಷಿಯಿದೆಯಂತೆ.
ಒಟ್ಟು 12,000ಕ್ಕೂ ಅಧಿಕ ಸದಸ್ಯರಿರುವ ಕರುನಾಡ ಚಾಲಕರ ಸಂಘದ ಸದಸ್ಯರೂ ಆಗಿರುವ ಮಹೇಂದ್ರ ಅವರು, ರಕ್ತದಾನವನ್ನೂ ಮಾಡುತ್ತಾರೆ. ಯಾರಿಗಾದರೂ ತುರ್ತಾಗಿ ರಕ್ತಬೇಕಿದ್ದರೆ ಈ ಸಂಘದ ಸದ್ಯರನ್ನು ಸಂಪರ್ಕಿಸಬಹುದು. ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ 87478 71143.
Comments are closed.