
ಚಾಮರಾಜನಗರ: ‘ಸಹರಾ ಮತ್ತು ಬಿರ್ಲಾ ಕಂಪೆನಿಯು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲಂಚ ನೀಡಿರುವ ಬಗ್ಗೆ ಬಿಳಿಚೀಟಿಯಲ್ಲಿ ನಮೂದಿಸಲಾಗಿದೆ. ಮೋದಿ ಯಾಕೆ ರಾಜೀನಾಮೆ ನೀಡಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಹಾಲಹಳ್ಳಿಯಲ್ಲಿ ಭಾನುವಾರ ನಡೆದ ಸಚಿವರಾಗಿದ್ದ ದಿ.ಎಚ್.ಎಸ್. ಮಹದೇವಪ್ರಸಾದ್ ಅವರ ಮಹಾಸ್ಮರಣೆ ಕಾರ್ಯಕ್ರಮದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಬಿಳಿಹಾಳೆಯಲ್ಲಿ ಬರೆದ ಮಾಹಿತಿಯು ಸಾಕ್ಷಿಯಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹಾಗಾಗಿ, ಯಾರದೋ ಮನೆಯಲ್ಲಿ ಸಿಕ್ಕಿರುವ ಡೈರಿ ಮತ್ತು ನನಗೆ ಯಾವುದೇ ಸಂಬಂಧ ಇಲ್ಲ’ ಎಂದು ಸಮಜಾಯಿಷಿ ನೀಡಿದರು.
‘ಬೆಂಗಳೂರಿನಲ್ಲಿ ಉಕ್ಕಿನ ಸೇತುವೆ ನಿರ್ಮಾಣ ಸಂಬಂಧ ₹ 150 ಕೋಟಿ ಲಂಚ ಪಡೆದಿದ್ದಾರೆಂದು ಬಿ.ಎಸ್. ಯಡಿಯೂರಪ್ಪ ಆರೋಪ ಮಾಡಿರುವುದರಲ್ಲಿ ಯಾವುದೇ ಹುರುಳಿಲ್ಲ. ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಅವರ ಡೈರಿಯಲ್ಲಿ ಏನಿದೆ ಎಂಬುದು ನನಗೆ ಗೊತ್ತಿಲ್ಲ’ ಎಂದು ಪ್ರತಿಕ್ರಿಯಿಸಿದರು.
‘ನಾನು 12 ಬಾರಿ ಬಜೆಟ್ ಮಂಡಿಸಿದ್ದೇನೆ. ನನ್ನ ಮೇಲೆ ಒಂದು ಕಪ್ಪುಚುಕ್ಕೆ ಇಲ್ಲ. ಒಂದು ಖಾಸಗಿ ದೂರು ಕೂಡ ದಾಖಲಾಗಿಲ್ಲ. ಯಡಿಯೂರಪ್ಪ ಆಧಾರರಹಿತ ಆರೋಪ ಮಾಡಿದ್ದಾರೆ. ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಇಂಥಹ ಆರೋಪ ಮಾಡುತ್ತಿದ್ದಾರೆ’ ಎಂದು ದೂರಿದರು.
Comments are closed.