ರಾಷ್ಟ್ರೀಯ

ಫೆ.9ಕ್ಕೆ ಶಶಿಕಲಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ

Pinterest LinkedIn Tumblr


ಚೆನ್ನೈ,ಫೆ.೬- ಕ್ಷಿಪ್ರ ಬೆಳವಣಿಗೆಯಲ್ಲಿ ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆಯಾಗಿರುವ ಶಶಿಕಲಾ ನಟರಾಜನ್ ಫೆ.೯ರಂದು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.
ಈ ನಡುವೆ ಪಕ್ಷದಿಂದ ಉಚ್ಚಾಟಿತರಾಗಿರುವ ರಾಜ್ಯ ಸಭೆ ಸದಸ್ಯೆ ಶಶಿಕಲಾ ಪುಷ್ಪ ಅವರು, ಶಶಿಕಲಾ ನಟರಾಜನ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದನ್ನು ತಡೆಯಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ತಮಿಳುನಾಡಿನ ಹಂಗಾಮಿ ರಾಜ್ಯಪಾಲ ವಿದ್ಯಾಸಾಗರ್ ಅವರು ಸದ್ಯ ಕೇಂದ್ರ ಸಚಿವರೊಬ್ಬರ ಪುತ್ರನ ವಿವಾಹ ಕಾರ್ಯಕ್ರಮದ ನಿಮಿತ್ತ ದೆಹಲಿಯಲ್ಲಿದ್ದು, ಇನ್ನೂ ಮೂರ್ನಾಲ್ಕು ದಿನ ದೆಹಲಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ನಿನ್ನೆ ಎಐಎಡಿಎಂಕೆ ಶಾಸಕರು ರಾಜ್ಯಪಾಲರನ್ನು ಭೇಟಿ ಮಾಡಲು ಮುಂದಾದರಾದರೂ ರಾಜ್ಯಪಾಲರು ದೆಹಲಿಯಲ್ಲಿರುವ ಕಾರಣ ಭೇಟಿ ಸಾಧ್ಯವಾಗಿಲ್ಲ.
ಶಶಿಕಲಾ ಪತಿ ಅಸ್ವಸ್ಥ:
ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಸಿದ್ಧತೆ ನಡೆಸುತ್ತಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರ ಪತಿ ಎಂ.ನಟರಾಜನ್ ಅವರು ಉಸಿರಾಟ ಸಮಸ್ಯೆಯಿಂದ ನಿನ್ನೆ ರಾತ್ರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಟರಾಜನ್ ಶ್ವಾಸಕೋಶ ಸಂಬಂಧಿತ ಕಾಯಿಲೆಗೆ ಗುರಿಯಾಗಿದ್ದು ಉಸಿರಾಟಕ್ಕೆ ತೀವ್ರ ತೊಂದರೆಯಾಗಿದೆ. ಹೀಗಾಗಿ ಅವರನ್ನು ಕಾರ್ಪೋರೇಟ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಟರಾಜನ್ ಪರಿಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಈ ಮಧ್ಯೆ ಅಕ್ರಮ ಆಸ್ತಿ ಸಂಬಂಧ ಸುಪ್ರೀಂಕೋರ್ಟ್ ಒಂದು ವಾರದಲ್ಲಿ ತೀರ್ಪು ನೀಡಲಿದ್ದು, ಶಶಿಕಲಾ ನಟರಾಜನ್ ಮುಖ್ಯಮಂತ್ರಿ ಸ್ಥಾನ ಅಲಂಕರಿಸಲು ಅಡ್ಡಿಯಾಗುವ ಸಾಧ್ಯತೆಯಿರುವುದರಿಂದ ಆತಂಕ ಎದುರಾಗಿದೆ.

Comments are closed.