
ಬೆಂಗಳೂರು (ಜ. 27): ನಿರೀಕ್ಷೆಯಂತೆ ಕೇಂದ್ರ ಸೇವೆಯಲ್ಲಿರುವ ಕರ್ನಾಟಕ ಕೇಡರ್ನ ಹಿರಿಯ ಐಪಿಎಸ್ ಅಧಿಕಾರಿ ರೂಪಕ್ ಕುಮಾರ್ ದತ್ತಾ ಅವರನ್ನು ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ)ರಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರೂಪಕ್ ಕುಮಾರ್ ದತ್ತಾ ಆಯ್ಕೆಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಸಕ್ತಿ ವಹಿಸಿದ್ದರು. ಹಾಗಾಗಿ ಕೇಂದ್ರ ಸೇವೆಯಲ್ಲಿರುವ ದತ್ತಾ ಅವರನ್ನು ರಾಜ್ಯ ಸೇವೆಗೆ ಕಳುಹಿಸಿಕೊಡುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದರು ಎಂದು ಮೂಲಗಳು ತಿಳಿಸಿದ್ದವು. ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರು ಜನವರಿ 31ಕ್ಕೆ ನಿವೃತ್ತಿ ಹೊಂದಲಿದ್ದಾರೆ.
ಆರ್.ಕೆ.ದತ್ತಾ ಯಾರು ?
ಉತ್ತರ ಪ್ರದೇಶದ ಕಾನ್ಪುರ ಮೂಲದ ಆರ್.ಕೆ.ದತ್ತಾ ಅವರು 1981 ಬ್ಯಾಚ್ನ ಕರ್ನಾಟಕ ಕೇಡರ್ನ ಐಪಿಎಸ್ ಅಧಿಕಾರಿಯಾಗಿದ್ದು, ಇದೇ ಅಕ್ಟೋಬರ್ನಲ್ಲಿ ನಿವೃತ್ತಿ ಹೊಂದಲಿದ್ದಾರೆ. ಓಂಪ್ರಕಾಶ್ ಅವರಿಗಿಂತ ಸೇವಾವಧಿಯಲ್ಲಿ ಹಿರಿಯರಾಗಿರುವ ಆರ್.ಕೆ.ದತ್ತಾ ಅವರನ್ನು ಈ ಹಿಂದೆಯೇ ಡಿಜಿ-ಐಜಿಪಿಯಾಗಿ ಆಯ್ಕೆ ಮಾಡಲು ಸರ್ಕಾರ ಉತ್ಸುಕವಾಗಿತ್ತು. ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ಹಾಗಾಗಿ ಓಂಪ್ರಕಾಶ್ ಅವರು ಆಯ್ಕೆಯಾದರು.
ಕರ್ನಾಟಕ ಕೇಡರ್ ಅಧಿಕಾರಿಯಾಗಿರುವ ರೂಪಕ್ ಕುಮಾರ್ ದತ್ತಾ ಅವರು, ರಾಜ್ಯದ ಕಾರವಾರ, ದಾವಣಗೆರೆಯಲ್ಲಿ ಎಸ್ಪಿಯಾಗಿ, ಗುಪ್ತದಳ, ಭದ್ರತಾ, ಜಾಗೃತ ದಳದ ಡಿಐಜಿಯಾಗಿ ಹಾಗೂ ವಿವಿಧ ವಲಯಗಳ ಐಜಿಪಿಯಾಗಿ, ಲೋಕಾಯುಕ್ತ ಎಡಿಜಿಪಿಯಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಸಿಐಡಿ ಪೊಲೀಸ್ ಮಹಾನಿರ್ದೇಶಕಾಗಿ ಸೇವೆ ಸಲ್ಲಿಸಿದ್ದರು. ನಂತರ ಕೇಂದ್ರ ಸೇವೆಗೆ ತೆರಳಿದ ಅವರು ಹೈದ್ರಾಬಾದ್, ಚೆನ್ನೈ, ಪಾಟ್ನಾ ವಲಯದ ಸಿಬಿಐ ನಿರ್ದೇಶಕರಾಗಿ ಮೂರು ವರ್ಷಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿದ್ದಾರೆ.
Comments are closed.